ಫುಟ್‌ಬಾಲ್ ಲೋಕದ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನೊಳಗೊಂಡ ಪೋರ್ಚುಗಲ್ ತಂಡವು ಈ ಬಾರಿ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.
ಸೆಪ್ಟೆಂಬರ್ 10ರಂದು ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ಎದುರು 1–0 ಅಂತರದಲ್ಲಿ ಸೋಲು ಕಾಣುವ ಮೂಲಕ ಪೋರ್ಚುಗಲ್ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.
ತಮ್ಮ ತಂಡ ವಿಶ್ವಕಪ್‌ನಿಂದ ನಿರ್ಗಮಿಸಿರುವ ಬಗ್ಗೆ ರೊನಾಲ್ಡೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದರು. 'ಪೋರ್ಚುಗಲ್‌ಗಾಗಿ ವಿಶ್ವಕಪ್ ಗೆಲ್ಲುವುದು ನನ್ನ ವೃತ್ತಿ ಬದುಕಿನ ಬಹುದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಕನಸಾಗಿತ್ತು. ಅದೃಷ್ಟವಶಾತ್ ಪೋರ್ಚುಗಲ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಆದರೆ, ಫುಟ್‌ಬಾಲ್ ಕ್ರೀಡೆಯ ಅತ್ಯುನ್ನತ ಮಟ್ಟಕ್ಕೆ ದೇಶದ ಹೆಸರನ್ನು ಕೊಂಡೊಯ್ಯುವುದು ನನ್ನ ದೊಡ್ಡ ಕನಸಾಗಿತ್ತು' ಎಂದು ಬರೆದುಕೊಂಡಿದ್ದರು.
ಇದೀಗ ರೊನೊಲ್ಡೊ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿರುವ ವಿರಾಟ್ ಕೊಹ್ಲಿ, 'ನನ್ನ ಪಾಲಿಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ' ಎಂದು ಬಣ್ಣಿಸಿದ್ದಾರೆ.
ವಿಶ್ವಕಪ್ ಸೋಲಿನ ನೋವಿನಲ್ಲಿರುವ ರೊನೊಲ್ಡೊ ಅವರನ್ನು ಉದ್ದೇಶಿಸಿ, 'ಕ್ರೀಡೆಗೆ ಹಾಗೂ ಕ್ರೀಡಾಭಿಮಾನಿಗಳಿಗಾಗಿ ನೀವು ಇಲ್ಲಿಯವರೆಗೂ ಮಾಡಿರುವ ಸಾಧನೆಯನ್ನು ಒಂದು ಪ್ರಶಸ್ತಿ ನಿರ್ಧರಿಸದು. ನೀವು ಜನರ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಲು ಹಾಗೂ ನಾನೂ ಸೇರಿದಂತೆ ಪ್ರಪಂಚದಾದ್ಯಂತ ನಿಮ್ಮ ಆಟವನ್ನು ನೋಡುವವರು ಹೇಗೆ ಆನಂದಿಸುತ್ತಾರೆ ಎಂಬುದನ್ನು ಹೇಳಲು ಯಾವ ಪ್ರಶಸ್ತಿಗೂ ಸಾಧ್ಯವಿಲ್ಲ. ಅದು ದೇವರ ವರವಾಗಿದೆ' ಎಂದು ಹೇಳಿದ್ದಾರೆ.
'ಪ್ರತಿ ಬಾರಿಯೂ ಹೃದಯದಿಂದಲೇ ಆಡುವ ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದ ಪ್ರತಿರೂಪವಾಗಿದ್ದೀರಿ. ಯಾವುದೇ ಕ್ರೀಡಾಪಟುವಿಗೆ ನಿಜವಾದ ಸ್ಫೂರ್ತಿಯಾಗಿದ್ದೀರಿ. ನೀವು ನನ್ನ ಪಾಲಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ' ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿಯ ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ 48 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದು, 21 ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಟ್ವಿಟರ್‌ನಲ್ಲೂ ಪ್ರಶಂಸೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.