ನವದೆಹಲಿ: 2020ನೇ ಸಾಲಿನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ್ದು,ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಅವರದ್ದಾಗಿದೆ.
ಈ ವರ್ಷ ₹ 196.36 ಕೋಟಿ ಆದಾಯ ಗಳಿಕೆಯೊಂದಿಗೆ ಕೊಹ್ಲಿ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ 96ನೇ ಸ್ಥಾನದಲ್ಲಿದ್ದರು. ನಿಯತಕಾಲಿಕೆ ಪ್ರಕಾರ, ಜಾಹೀರಾತು ಮತ್ತು ಇತರೆ ಮೂಲಗಳಿಂದ ಅವರು, ₹ 181 ಕೋಟಿ ಗಳಿಸುತ್ತಾರೆ. ಸಂಭಾವನೆ ರೂಪದಲ್ಲಿ ₹ 15 ಕೋಟಿ ಜೇಬಿಗಿಳಿಸುತ್ತಾರೆ.
ಪಟ್ಟಿಯಲ್ಲಿ ಒಟ್ಟು 35 ಜನರು ಬಾಸ್ಕೆಟ್ ಬಾಲ್ ಆಟಗಾರರಿದ್ದಾರೆ. ಅಮೆರಿಕನ್ ಫುಟ್‌ಬಾಲ್‌ನ 31 ಆಟಗಾರರು, 14 ಮಂದಿ ಫುಟ್‌ಬಾಲ್ ಆಟಗಾರರು, 6 ಟೆನಿಸ್ ಪಟುಗಳು, ಬಾಕ್ಸಿಂಗ್ ಮತ್ತು ಮಾರ್ಷಲ್ ಆರ್ಟ್ಸ್‌ನ ಐವರು, ನಾಲ್ವರು ಗಾಲ್ಫ್ ಪಟುಗಳು, ಮೂವರು ಮೋಟಾರ್ ರೇಸರ್‌ಗಳು ಹಾಗೂ ಬೇಸ್‌ಬಾಲ್ ಮತ್ತು ಕ್ರಿಕೆಟ್‌ನ ತಲಾ ಒಬ್ಬೊಬ್ಬರು ಇದ್ದಾರೆ.
‘ಕೊರೊನಾವೈರಸ್ ಸೋಂಕು ಫುಟ್‌ಬಾಲ್ ತಾರೆಗಳಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆದಾಯದ ಮೇಲೆ ವೇತನ ಕಡಿತ ಪರಿಣಾಮ ಉಂಟು ಮಾಡಿದೆ. ಆ ಮೂಲಕ ಟೆನಿಸ್ ಆಟಗಾರನೊಬ್ಬ ವಿಶ್ವದಲ್ಲೇ ಅತಿಹೆಚ್ಚು ಆದಾಯ ಹೊಂದಿರುವ ಕ್ರೀಡಾಪಟು ಎನಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ’ ಎಂದು ನಿಯತಕಾಲಿಕೆಯ ಹಿರಿಯ ಸಂಪಾದಕ ಕರ್ಟ್ ಬಾಡೆನ್‌ಹೌಸೆನ್ ತಿಳಿಸಿದ್ದಾರೆ.
ಮೆಸ್ಸಿ ಹಾಗೂ ರೊನಾಲ್ಡೊ ಅವರನ್ನು ಹಿಂದಿಕ್ಕಿ ರೋಜರ್ ಫೆಡರರ್ ಈ ಬಾರಿ ಮೊದಲ ಸ್ಥಾನ ಗಳಿಸಿದ್ದಾರೆ. ರೊನಾಲ್ಡೊ, ಮೆಸ್ಸಿ ಮತ್ತು ನೇಯ್ಮರ್ ಕ್ರಮವಾಗಿ 2, 3 ಮತ್ತು ನಾಲ್ಕನೇ ಸ್ಥಾನಗಳಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.