ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ನಡುವೆ ಯಾವುದೇ ಶೀತಲ ಸಮರ ಇಲ್ಲ. ಅದು ಕೇವಲ ಮಾಧ್ಯಮಗಳು ಕಟ್ಟಿರುವ ಕಥೆಗಳು ಎಂದು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಹೇಳಿದರು.
ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಅದರ ನಂತರ ನಾಯಕ ಕೊಹ್ಲಿ ಮತ್ತು ಉಪನಾಯಕ ರೋಹಿತ್ ನಡುವೆ ಶೀತಲ ಸಮರ ನಡೆದಿದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು.
ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿನೋದ್ ರಾಯ್, ‘ಈ ವಿಷಯವು ನೀವು (ಮಾಧ್ಯಮದವರು) ಸೃಷ್ಟಿ ಮಾಡಿರುವುದು’ ಎಂದರು. ಆದರೆ ಈ ವಿಷಯದ ಕುರಿತು ಕೊಹ್ಲಿ ಮತ್ತು ರೋಹಿತ್ ಇದುವರೆಗೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಅನುಷ್ಕಾ ಖಾತೆ ಅನ್‌ಫಾಲೋ ಮಾಡಿದ ಶರ್ಮಾ!: ಕ್ರಿಕೆಟಿಗ ರೋಹಿತ್ ಶರ್ಮಾ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಇನ್ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದರಿಂದಾಗಿ ರೋಹಿತ್ ಮತ್ತು ಕೊಹ್ಲಿ ಅವರ ನಡುವೆ ವೈಮನಸ್ಯ ತಲೆದೋರಿದೆ ಎಂಬ ವದಂತಿಗಳಿಗೆ ಪುಷ್ಠಿ ದೊರೆತಿದೆ.
ಶುಕ್ರವಾರ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.