ADVERTISEMENT

ICC Rankings | 6ನೇ ಸ್ಥಾನಕ್ಕೇರಿದ ಕೊಹ್ಲಿ, 8ನೇ ಸ್ಥಾನಕ್ಕೆ ಕುಸಿದ ಬಾಬರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2024, 7:30 IST
Last Updated 10 ಜನವರಿ 2024, 7:30 IST
<div class="paragraphs"><p>ವಿರಾಟ್‌ ಕೊಹ್ಲಿ ಹಾಗೂ ಬಾಬರ್ ಅಜಂ</p></div>

ವಿರಾಟ್‌ ಕೊಹ್ಲಿ ಹಾಗೂ ಬಾಬರ್ ಅಜಂ

   

ರಾಯಿಟರ್ಸ್ ಚಿತ್ರಗಳು

ದುಬೈ: ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೂರು ಸ್ಥಾನಗಳ ಏರಿಕೆ ಕಂಡಿರುವ ಭಾರತ ಕ್ರಿಕೆಟ್‌ ತಂಡದ ಅನುಭವಿ ಆಟಗಾರ ವಿರಾಟ್‌ ಕೊಹ್ಲಿ, ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಅಗ್ರಸ್ಥಾನದ ಕಡೆಗೆ ಮುನ್ನುಗ್ಗಿದ್ದಾರೆ.

ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಗಿದ ಎರಡು ಪಂದ್ಯಗಳ ಸರಣಿಯಲ್ಲಿ ಒಂದು ಅರ್ಧಶತಕ ಸಹಿತ 172 ರನ್‌ ಗಳಿಸಿದ್ದ ಅವರ ಖಾತೆಯಲ್ಲಿ ಒಟ್ಟು 775 ರೇಟಿಂಗ್‌ ಪಾಯಿಂಟ್‌ಗಳಿವೆ. ಕೊಹ್ಲಿ ಹೊರತುಪಡಿಸಿ ರೋಹಿತ್‌ ಶರ್ಮಾ ಮಾತ್ರವೇ ಅಗ್ರ 10ರಲ್ಲಿ ಕಾಣಿಸಿಕೊಂಡಿರುವ ಭಾರತದ ಬ್ಯಾಟರ್‌. ಅವರ ಖಾತೆಯಲ್ಲಿ 748 ಪಾಯಿಂಟ್‌ಗಳಿದ್ದು, 10ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ (864), ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾದ ಟೆಸ್ಟ್‌ ಪರಿಣತ ಬ್ಯಾಟರ್‌ಗಳಾದ ಜೋ ರೂಟ್‌ (859) ಮತ್ತು ಸ್ಟೀವ್‌ ಸ್ಮಿತ್‌ (818) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಪಾಕಿಸ್ತಾನದ ಬಾಬರ್‌ ಅಜಂ (768) ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೊದಲು ಅವರು ಆರನೇ ಸ್ಥಾನದಲ್ಲಿದ್ದರು.

ತಂಡ ವಿಭಾಗದಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್‌ ಅಗ್ರ ಮೂರು ಸ್ಥಾನಗಳಲ್ಲಿವೆ.

ಅಗ್ರ ಐದರಲ್ಲಿ ಭಾರತದ ಮೂವರು
ಬೌಲರ್‌ಗಳ ವಿಭಾದಲ್ಲಿ ಭಾರತದ ಮೂವರು ಮೊದಲ ಐದು ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್‌ ಆರ್‌..ಅಶ್ವಿನ್‌ (863) ಮೊದಲ ಸ್ಥಾನದಲ್ಲಿದ್ದರೆ, ಜಸ್‌ಪ್ರಿತ್‌ ಬೂಮ್ರಾ (787) ಮತ್ತು ರವೀಂದ್ರ ಜಡೇಜ (774) ನಾಲ್ಕು, ಐದನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್ (858) ಹಾಗೂ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ (851) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ.

ನಂ.1 ಆಲ್‌ರೌಂಡರ್ ಜಡೇಜ
ಬೌಲರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಜಡೇಜ, ಆಲ್‌ರೌಂಡರ್‌ಗಳ ಪಟ್ಟಿಯನ್ನು ಮುನ್ನಡೆಸುತ್ತಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 434 ಪಾಯಿಂಟ್‌ಗಳಿವೆ. ಎರಡನೇ ಸ್ಥಾನದಲ್ಲಿ ಅಶ್ವಿನ್‌ (341) ಇದ್ದಾರೆ. ಈ ಇಬ್ಬರ ನಡುವೆ 93 ಪಾಯಿಂಟ್‌ಗಳ ಅಂತರವಿದೆ.

ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ (320) ಮತ್ತು ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ (307) ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.