ADVERTISEMENT

ಕೊಹ್ಲಿಯ ದೀರ್ಘ ಪ್ರತಿಕ್ರಿಯೆ ಬಳಿಕ 'ನನ್ನದೂ ಅದೇ ಉತ್ತರ' ಎಂದಿದ್ದೆ: ಸರ್ಫರಾಜ್‌

ಹಾಸ್ಯ ಪ್ರಸಂಗ ನೆನಪಿಸಿಕೊಂಡ ಪಾಕಿಸ್ತಾನ ತಂಡದ ಮಾಜಿ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2023, 8:05 IST
Last Updated 1 ಏಪ್ರಿಲ್ 2023, 8:05 IST
ವಿರಾಟ್‌ ಕೊಹ್ಲಿ ಹಾಗೂ ಸರ್ಫರಾಜ್ ಅಹಮದ್
ವಿರಾಟ್‌ ಕೊಹ್ಲಿ ಹಾಗೂ ಸರ್ಫರಾಜ್ ಅಹಮದ್   

ಇಂಗ್ಲೆಂಡ್‌ನಲ್ಲಿ ನಡೆದ 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ವೇಳೆ ನಡೆದ ಹಾಸ್ಯ ಪ್ರಸಂಗವೊಂದನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ಸರ್ಫರಾಜ್‌ ಅಹಮದ್‌ ನೆನಪಿಸಿಕೊಂಡಿದ್ದಾರೆ.

ಭಾರತ ತಂಡದ ನಾಯಕರಾಗಿದ್ದ ವಿರಾಟ್‌ ಕೊಹ್ಲಿ ಹಾಗೂ ಸರ್ಫರಾಜ್‌ ಅವರನ್ನು, ವಿಶ್ವಕಪ್‌ಗೂ ಮುನ್ನ ನಡೆದ ನಾಯಕರ ಮಾತುಕತೆ ವೇಳೆ ಭಾರತ–ಪಾಕಿಸ್ತಾನ ಪಂದ್ಯದ ಕುರಿತು ಪ್ರಶ್ನಿಸಲಾಗಿತ್ತು. ಆ ವೇಳೆ ಕೊಹ್ಲಿ, ದೀರ್ಘವಾಗಿ ಉತ್ತರಿಸಿದ್ದರು. ಬಳಿಕ, ಸರ್ಫರಾಜ್‌ 'ನನ್ನ ಉತ್ತರವೂ ಅದೇ. ಬೇರೇನಿಲ್ಲ' ಎಂದು ಚುಟುಕಾಗಿ ಪ್ರತಿಕ್ರಿಯಿಸಿದ್ದರು. ಸರ್ಫರಾಜ್‌ ಪ್ರತಿಕ್ರಿಯೆ ಕೇಳಿ ಅಲ್ಲಿದ್ದವರೆಲ್ಲ ನಕ್ಕಿದ್ದರು.

ಅದಾದ ಬಳಿಕ ಪಾಕ್‌ ಮಾಜಿ ನಾಯಕನನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಲಾಗಿತ್ತು.

ADVERTISEMENT

ಇಂಗ್ಲೆಂಡ್‌ನಲ್ಲಿ ನಡೆದ ಈ ಪ್ರಸಂಗದ ಬಗ್ಗೆ, ಯುಟ್ಯೂಬರ್‌ ನಾದಿರ್‌ ಅಲಿ ಅವರೊಂದಿಗಿನ ಪಾಡ್‌ಕಾಸ್ಟ್‌ ಸಂಭಾಷಣೆ ವೇಳೆ ಸರ್ಫರಾಜ್‌ ಇತ್ತೀಚೆಗೆ ಮಾತನಾಡಿದ್ದಾರೆ.

'ಭಾರತ–ಪಾಕಿಸ್ತಾನ ಪಂದ್ಯದ ಕುರಿತು ಮತ್ತು ಜನರು ಪಂದ್ಯದ ಟಿಕೆಟ್‌ ಕೇಳಿವಾಗ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ನಮ್ಮನ್ನು ಕೇಳಲಾಯಿತು. ನೀವು ಮೊದಲು ವಿರಾಟ್‌ ಕೊಹ್ಲಿಯನ್ನು ಕೇಳಬಹುದು ಎಂದೆ. ಬ್ರದರ್‌ ಮೊದಲು ನೀವೇಕೆ ಉತ್ತರಿಸಬಾರದು? ಎಂದು ಕೊಹ್ಲಿಗೆ ಹೇಳಿದೆ. ಮಾತು ಆರಂಭಿಸಿದ ವಿರಾಟ್‌, ಇಂಗ್ಲಿಷ್‌ನಲ್ಲಿ ದೀರ್ಘವಾಗಿ ಮಾತು ಮುಂದುವರಿಸಿದರು. ನಾನು 'ಓ ಅಣ್ಣಾ.. ಯಾವಾಗ ಮಾತು ನಿಲ್ಲಿಸ್ತೀಯಾ' ಎನ್ನುವ ಹಾಗೆ ಅವರನ್ನೇ ನೋಡಿದೆ. ಆ ಕ್ಷಣ ನಾನು 'ಇದನ್ನೆಲ್ಲ ಯಾರು ಅನುವಾದ ಮಾಡುತ್ತಾರೋ' ಎಂದು ಯೋಚಿಸಿದೆ. ಎಲ್ಲವನ್ನೂ ಕೇಳಿದ ಬಳಿಕ, ನನ್ನ ಉತ್ತರವೂ ಅದೇ ಎಂದೆ. ಇದು ತುಂಬಾ ಸರಳವಾದ ಪ್ರಶ್ನೆ. ಆದರೆ, ವಿರಾಟ್‌ ದೀರ್ಘ ಉತ್ತರ ನೀಡಿದ್ದರು ಎಂದು ಭಾವಿಸಿದ್ದೆ' ಎಂದು ಹೇಳಿಕೊಂಡಿದ್ದಾರೆ.

ಮುಂದುವರಿದು, ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ಯಾವಾಗಲೂ ಅಪಾರ ನಿರೀಕ್ಷೆ ಹೊಂದಿರುತ್ತವೆ. ಆದರೆ, ಆಟಗಾರರ ಪಾಲಿಗೆ ಇವು ತಂಡದ ಗೆಲುವಿಗಾಗಿ ಆಡುವ ಪಂದ್ಯಗಳಷ್ಟೇ. ಒತ್ತಡವಿರುತ್ತದೆಯಾದರೂ, ಒಮ್ಮೆ ಮೈದಾನಕ್ಕೆ ಇಳಿದರೆ, ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಸಾಧ್ಯವಾದಷ್ಟು ಉತ್ತಮವಾಗಿ ಆಡುವುದಷ್ಟೇ ಮುಖ್ಯ. ಕ್ರೀಡಾಂಗಣದಲ್ಲಿ ವಿಭಿನ್ನ ಸನ್ನಿವೇಶ ಸೃಷ್ಟಿಯಾಗಿರುತ್ತದೆಯಾದರೂ, ಅಂತಿಮವಾಗಿ ಎಂದಿನಂತೆ ಇದೂ ಒಂದು ಪಂದ್ಯವಾಗಿ ಉಳಿಯುತ್ತದೆ ಅಷ್ಟೇ ಎಂದು ವಿವರಿಸಿದ್ದಾರೆ.

ಆಕಳಿಕೆ ವಿಡಿಯೊ ವೈರಲ್‌
ಭಾರತ ಹಾಗೂ ಪಾಕಿಸ್ತಾನ ತಂಡಗಳು 2019ರ ಜೂನ್‌ 16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಸರ್ಫರಾಜ್‌ ಅವರು ಪಂದ್ಯದ ವೇಳೆ ಆಕಳಿಸಿದ್ದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

ಈ ಪಂದ್ಯವನ್ನು ಭಾರತ 89 ರನ್‌ ಅಂತರದಿಂದ ಗೆದ್ದುಕೊಂಡಿತ್ತು. ರೋಹಿತ್‌ ಶರ್ಮಾ ಶತಕ (140) ಸಿಡಿಸಿದರೆ, ವಿರಾಟ್ ಕೊಹ್ಲಿ (77) ಹಾಗೂ ಕೆ.ಎಲ್‌.ರಾಹುಲ್‌ (57) ಅರ್ಧಶತಕ ಗಳಿಸಿ ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.