ನವದೆಹಲಿ: ಭಾರತ ಕ್ರಿಕೆಟ್ ತಂಡದ 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 25 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ. ಆ ಮೂಲಕ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 8 ರನ್ ಗಳಿಸಿದ್ದಾಗ ಅವರು ಈ ಸಾಧನೆ ಮಾಡಿದರು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 44 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 20 ರನ್ ಗಳಿಸಿದರು.
2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ, ಈ ವರೆಗೆ 492 ಪಂದ್ಯಗಳ 549 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ 25,012 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಅತ್ಯಧಿಕ ರನ್ ಗಳಿಸಿದ ದಾಖಲೆ ಹೊಂದಿರುವ ದಿಗ್ಗಜ ಬ್ಯಾಟರ್ ಸಚಿನ್ ಅವರಿಗೆ 25 ಸಾವಿರ ರನ್ ಗಳಿಸಲು 577 ಇನಿಂಗ್ಸ್‌ಗಳು ಬೇಕಾಗಿದ್ದವು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 588 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.
ಕೊಹ್ಲಿ ಏಕದಿನ ಮಾದರಿಯಲ್ಲಿ 262 ಇನಿಂಗ್ಸ್‌ಗಳಿಂದ 12,809 ರನ್, ಟೆಸ್ಟ್ ಕ್ರಿಕೆಟ್‌ನಲ್ಲಿ 180 ಇನಿಂಗ್ಸ್‌ಗಳಿಂದ 8,195 ಮತ್ತು ಟಿ20ಯಲ್ಲಿ 107 ಇನಿಂಗ್ಸ್‌ಗಳಿಂದ 4,008 ರನ್ ಗಳಿಸಿದ್ದಾರೆ.
ಅಧಿಕ ಸರಾಸರಿ ಹೊಂದಿರುವ ಕೊಹ್ಲಿ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವರೆಗೆ ಆರು ಬ್ಯಾಟರ್‌ಗಳಷ್ಟೇ 25 ಸಾವಿರಕ್ಕಿಂತ ಅಧಿಕ ರನ್ ಗಳಿಸಿದ್ದಾರೆ. ಈ ಎಲ್ಲ ಬ್ಯಾಟರ್‌ಗಳ ಪೈಕಿ ಕೊಹ್ಲಿ ಅತ್ಯುತ್ತಮ (53ಕ್ಕಿಂತ ಅಧಿಕ) ಸರಾಸರಿ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಅವರು 49.10 ಸರಾಸರಿ ಹೊಂದಿರುವುದೇ ಎರಡನೇ ಅತ್ಯುತ್ತಮ ಸರಾಸರಿಯಾಗಿದೆ. ಸಚಿನ್ ಬ್ಯಾಟಿಂಗ್ ಸರಾಸರಿ 48.52ರ ಆಗಿದೆ.
25 ಸಾವಿರಕ್ಕಿಂತ ಅಧಿಕ ರನ್ ಗಳಿಸಿದವರು
ಆಟಗಾರ | ದೇಶ | ಪಂದ್ಯ | ಇನಿಂಗ್ಸ್ | ರನ್ | ಸರಾಸರಿ |
ಸಚಿನ್ ತೆಂಡೂಲ್ಕರ್ | ಭಾರತ | 664 | 782 | 34,357 | 48.52 |
ಸನತ್ ಜಯಸೂರ್ಯ | ಶ್ರೀಲಂಕಾ | 594 | 666 | 28016 | 46.77 |
ರಿಕಿ ಪಾಂಟಿಂಗ್ | ಆಸ್ಟ್ರೇಲಿಯಾ | 560 | 668 | 27483 | 45.95 |
ಮಹೇಲ ಜಯವರ್ಧನೆ | ಶ್ರೀಲಂಕಾ | 652 | 725 | 25957 | 39.15 |
ಜಾಕ್ ಕಾಲಿಸ್ | ದಕ್ಷಿಣ ಆಫ್ರಿಕಾ | 519 | 617 | 25534 | 49.10 |
ವಿರಾಟ್ ಕೊಹ್ಲಿ | ಭಾರತ | 492 | 549 | 25,012 | 53.65 |
ಭಾರತಕ್ಕೆ ಜಯ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲೂ ಗೆಲುವು ಸಾಧಿಸಿರುವ ಆತಿಥೇಯ ಭಾರತ ತಂಡ, ನಾಲ್ಕು ಪಂದ್ಯಗಳ ಸರಣಿಯಲ್ಲಿ 2–0 ಅಂತರದ ಮುನ್ನಡೆ ಗಳಿಸಿದೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪಡೆ 263 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ 262 ರನ್ ಗಳಿಗೆ ಸರ್ವಪತನ ಕಂಡಿತ್ತು.
ಕೇವಲ 1 ರನ್ ಅಂತರದ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ, 113 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 115 ರನ್‌ಗಳ ಸಾಧಾರಣ ಗುರಿ ಪಡೆದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.