ADVERTISEMENT

ಪಾಕ್ ಎದುರು ಕೊಹ್ಲಿ ಬ್ಯಾಟಿಂಗ್ ಮಾಡಿದ್ದು ದೇವರೇ ಹಾಡಿದಂತಿತ್ತು: ಗ್ರೇಗ್ ಚಾಪೆಲ್

ಪಿಟಿಐ
Published 29 ಅಕ್ಟೋಬರ್ 2022, 13:19 IST
Last Updated 29 ಅಕ್ಟೋಬರ್ 2022, 13:19 IST
ವಿರಾಟ್ ಕೊಹ್ಲಿ (ಪಿಟಿಐ ಚಿತ್ರ)
ವಿರಾಟ್ ಕೊಹ್ಲಿ (ಪಿಟಿಐ ಚಿತ್ರ)   

ಪರ್ತ್‌: ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 'ಸೂಪರ್‌ 12'ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ನಡೆಸಿದ ರೀತಿಯು ದೇವರ ಗಾಯನದಂತಿತ್ತು ಎಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಗ್ರೇಗ್‌ ಚಾಪೆಲ್ ಬಣ್ಣಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23 ರಂದುಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159 ರನ್‌ ಕಲೆಹಾಕಿತ್ತು.

ಸವಾಲಿನ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ.ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ(4) ಹಾಗೂ ಉಪನಾಯಕ ಕೆ.ಎಲ್‌.ರಾಹುಲ್‌ (4) ತಂಡದ ಮೊತ್ತ 10 ರನ್ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದರು.ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌ (15) ಮತ್ತು ಅಕ್ಷರ್ ಪಟೇಲ್‌ (2) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಕೇವಲ 31 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿತ್ತು.

ADVERTISEMENT

ಈ ಹಂತದಲ್ಲಿ ಹಾರ್ದಿಕ್‌ ಪಾಂಡ್ಯ (40) ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ, ರಕ್ಷಣಾತ್ಮಕವಾಗಿ ಅಡುತ್ತಲೇ ರನ್‌ ಗತಿ ಹೆಚ್ಚಿಸಿದ್ದರು. ಕೊನೆಯವರೆಗೂ ಹೋರಾಡಿ ಗೆಲುವು ತಂದುಕೊಟ್ಟರು.

ಕೇವಲ53 ಎಸೆತಗಳನ್ನು ಎದುರಿಸಿದ ಕೊಹ್ಲಿ, 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್‌ ಬಾರಿಸಿ ಮಿಂಚಿದ್ದರು. ಅಂದಹಾಗೆ, ಮೊದಲ 50 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡಿದ್ದ ಅವರು, ನಂತರ 32 ರನ್‌ ಅನ್ನು ಕೇವಲ 10 ಎಸೆತಗಳಲ್ಲೇ ಚಚ್ಚಿದ್ದರು.

ಕೊಹ್ಲಿ ಆಟದಬಲದಿಂದಾಗಿ ಭಾರತಕ್ಕೆ 4 ವಿಕೆಟ್‌ ಅಂತರದ ಜಯ ಒಲಿದಿತ್ತು.

ಈ ಇನಿಂಗ್ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಚಾಪೆಲ್‌, 'ಭಗವದ್ಗೀತೆಯು ಹಿಂದೂ ಧರ್ಮದ ಸಾರವನ್ನು ಒಳಗೊಂಡ ಪವಿತ್ರ ಗ್ರಂಥವಾಗಿದೆ. ಅದನ್ನು ದೇವರೇ ಹಾಡಿದ್ದು ಎಂದು ಹೇಳಲಾಗುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಆಡಿದ ಇನಿಂಗ್ಸ್‌ ಸಹ ದೇವರ ಹಾಡಿಗೆ ಸಮೀಪದ್ದಾಗಿತ್ತು' ಎಂದು 'ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌'ಗೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಕೊಹ್ಲಿಯ ಆಕ್ರಮಣಕಾರಿ ಶೈಲಿಯು ಬ್ಯಾಟಿಂಗ್‌ ಕಲೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಚುಟುಕು ಕ್ರಿಕೆಟ್‌ ಅನ್ನು ಕಲಾತ್ಮಕಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ಸಹ ಆಗಿರುವ ಚಾಪೆಲ್‌, ಟೆಸ್ಟ್‌ ಕ್ರಿಕೆಟ್‌ ಅನ್ನು ಇಷ್ಟಪಡುವವರು ಟಿ20 ಮಾದರಿಯನ್ನು ಹೊಡಿಬಡಿ ಮಾದರಿಯ ಆಟವೆಂದು ಹೇಳುತ್ತಾರೆ. ಆದರೆ, ಕೊಹ್ಲಿ ಪಾಕಿಸ್ತಾನ ಬೌಲರ್‌ಗಳ ತಂತ್ರಗಳನ್ನು ಚೆನ್ನಾಗಿ ಅರಿತ ನಂತರ ದಾಳಿ ಮಾಡಿದರು ಎಂದು ಹೇಳಿದ್ದಾರೆ.

'ಬ್ಯಾಟಿಂಗ್‌ ಕೌಶಲವನ್ನು ಪ್ರದರ್ಶಿಸಿದ ಹಾಗೂ ನಾನು ಜೀವಮಾನದಲ್ಲೇ ನೋಡಿರದಂತಹ ಇನಿಂಗ್ಸ್‌ ಅದು' ಎಂದು ಕೊಹ್ಲಿ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.

ಕಳೆದ 15 ವರ್ಷಗಳಿಂದ ನೋಡಿದ ಎಲ್ಲ ಇನಿಂಗ್ಸ್‌ಗಳಿಗಿಂತಲೂ ಮಿಗಿಲಾಗಿ, ಟಿ20 ಕ್ರಿಕೆಟ್‌ ಅನ್ನು ಕಲಾತ್ಮಕವಾಗಿ ರೂಪಿಸಿದ ಇನಿಂಗ್ಸ್‌ ಇದಾಗಿದೆ. ಚುಟಕು ಕ್ರಿಕೆಟ್‌ ಮನರಂಜನಾತ್ಮಕವಾದದ್ದು ಎಂಬುದನ್ನು ಯಾರೊಬ್ಬರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.