ಶಿಲ್ಲಾಂಗ್: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಅವರು ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗುರು ವಾರ ಅಜೇಯ ದ್ವಿಶತಕ ಸಿಡಿಸಿದರು.
ದೆಹಲಿ ತಂಡವನ್ನು ಪ್ರತಿನಿಧಿಸುತ್ತಿರುವ ಆರ್ಯವೀರ್ ಮೇಘಾಲಯ ವಿರುದ್ಧದ ಪಂದ್ಯದಲ್ಲಿ 229 ಎಸೆತಗಳಲ್ಲಿ ಔಟಾಗದೇ 200 ರನ್ ಗಳಿಸಿದರು. ಆರ್ಯವೀರ್ ಮತ್ತು ಅರ್ಣವ್ ಎಸ್. ಬಗ್ಗಾ (114;108) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 180 ರನ್ ಸೇರಿಸಿದರು. ಹೀಗಾಗಿ ದೆಹಲಿ ತಂಡವು ಎರಡೇ ದಿನದಾಟದ ಅಂತ್ಯಕ್ಕೆ 81 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 468 ರನ್ ಸೇರಿಸಿ 208 ರನ್‌ಗಳ ಮುನ್ನಡೆ ಪಡೆದಿದೆ. ಮೇಘಾಲಯ ಮೊದಲ ಇನಿಂಗ್ಸ್‌ನಲ್ಲಿ 260 ರನ್ ಗಳಿಸಿತ್ತು.
ಕ್ರಿಕೆಟ್: ಕರ್ನಾಟಕ ಚೇತರಿಕೆಯ ಆಟ
ಬೆಂಗಳೂರು: ಮೊದಲ ಇನಿಂಗ್ಸ್‌ನಲ್ಲಿ ಫಾಲೊ ಆನ್‌ಗೆ ಒಳಗಾದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ (19 ವರ್ಷದೊಳಗಿನವರ) ಟೂರ್ನಿಯ ಪಂದ್ಯದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಚೇತರಿಕೆಯ ಆಟ ಪ್ರದರ್ಶಿಸಿದೆ.
ಆತಿಥೇಯ ಚಂಡೀಗಢ ಮೊದಲ ಇನಿಂಗ್ಸ್‌ನಲ್ಲಿ 272 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡವು 99 ರನ್‌ಗೆ ಕುಸಿದು ಫಾಲೊ ಆನ್‌ಗೆ ಒಳಗಾಯಿತು. ಮತ್ತೆ ಬ್ಯಾಟಿಂಗ್ ನಡೆಸಿದ ಧೀರಜ್ ಗೌಡ ನಾಯಕತ್ವದ ಕರ್ನಾಟಕ 70 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 312 ರನ್ ಗಳಿಸಿ, 139 ರನ್‌ಗಳ ಮುನ್ನಡೆ ಪಡೆದಿದೆ. ಕರ್ನಾಟಕದ ಮಣಿಕಾಂತ್ ಶಿವಾನಂದ್ (65;104ಎ), ಧೀರಜ್ ಗೌಡ (75;79ಎ), ಕಾರ್ತೀಕೇಯ ಕೆ.ಪಿ. (41;67ಎ) ಮತ್ತು ಹಾರ್ದಿಕ್ ರಾಜ್ (ಔಟಾಗದೇ 43; 41ಎ) ಉಪಯುಕ್ತ ಕಾಣಿಕೆ ನೀಡಿದರು. ಚಂಡೀಗಢದ ಮಾರ್ಕಂಡೆ ಪಾಂಚಾಲ್ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.