ADVERTISEMENT

ಪಾಕಿಸ್ತಾನದ ಪಂಜಾಬ್ ಉಸ್ತುವಾರಿ ಕ್ರೀಡಾ ಸಚಿವರಾಗಿ ವಹಾಬ್ ರಿಯಾಜ್ ನೇಮಕ

ಪಿಟಿಐ
Published 27 ಜನವರಿ 2023, 14:13 IST
Last Updated 27 ಜನವರಿ 2023, 14:13 IST
   

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಎಡಗೈ ವೇಗಿ ವಹಾಬ್ ರಿಯಾಜ್ ಪಂಜಾಬ್ ಪ್ರಾಂತ್ಯದ ಉಸ್ತುವಾರಿ ಕ್ರೀಡಾ ಸಚಿವರಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ ಕ್ರಿಕೆಟ್ ವಲಯದಲ್ಲಿ ಸಕ್ರಿಯವಾಗಿರುವಾಗಲೇ ಅವರು ರಾಜಕೀಯ ಪ್ರವೇಶಿಸಿದ್ದಾರೆ.

ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ವಹಾಬ್, ಪಾಕಿಸ್ತಾನಕ್ಕೆ ಮರಳಿದ ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ 37 ವರ್ಷದ ವಹಾಬ್‌ ಪೇಶಾವರ್ ಝಲ್ಮಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಂಜಾಬ್ ಪ್ರಾಂತ್ಯದ ಉಸ್ತುವಾರಿ ಕ್ರೀಡಾ ಸಚಿವರಾಗಿ ನೇಮಕಗೊಂಡ ಬಳಿಕವೂ ಅವರು ಈ ಲೀಗ್‌ ಆಡುವ ಸಾಧ್ಯತೆಯಿದೆ.

ADVERTISEMENT

‌2020 ರಲ್ಲಿ ವಹಾಬ್‌ ಪಾಕಿಸ್ತಾದ ಪರ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು. 27 ಟೆಸ್ಟ್, 92 ಏಕದಿನ ಪಂದ್ಯ ಮತ್ತು 36 ಟಿ–20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಹಾಬ್‌, 103 ವಿಕೆಟ್‌ ಪಡೆದು ಪಾಕ್‌ನ ಪ್ರಮುಖ ಬೌಲರ್‌ ಎನಿಸಿಕೊಂಡಿದ್ದರು.

ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಶುಕ್ರವಾರ ವಹಾಬ್ ಅವರ ನೇಮಕಾತಿ ದೃಢಪಡಿಸಿದ್ದಾರೆ ಮತ್ತು ಮುಂದಿನ ಮೂರು–ನಾಲ್ಕು ತಿಂಗಳಲ್ಲಿ ಪಂಜಾಬ್ ವಿಧಾನಸಭೆಯ ಚುನಾವಣೆ ನಡೆಯಲಿದ್ದು, ಅಲ್ಲಿವರೆಗೂ ವಹಾಬ್‌ ಹುದ್ದೆಯಲ್ಲಿರುವ ಸಾಧ್ಯತೆಯಿದೆ.

ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ಈ ತಿಂಗಳು ಸ್ಥಳೀಯ ಶಾಸಕಾಂಗ ವಿಸರ್ಜನೆಗೊಂಡಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಿತ್ರರಾಗಿರುವ ಇಲ್ಲಿನ ಮುಖ್ಯಮಂತ್ರಿ ಸರ್ಕಾರ ವಿಸರ್ಜಿಸಿ ಕ್ಷಿಪ್ರ ಚುನಾವಣೆಗೆ ಒತ್ತಾಯಿಸುತ್ತಿದ್ದಾರೆ.

ವಹಾಬ್ ರಾಜಕೀಯಕ್ಕೆ ಸೇರಿದ ಮೊದಲ ಕ್ರಿಕೆಟಿಗನಲ್ಲ. ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್ ಅವರು ಆಗಸ್ಟ್ 2018 ರಿಂದ ಏಪ್ರಿಲ್ 2022 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ವೇಗಿ ಸರ್ಫರಾಜ್ ನವಾಜ್ ಅವರು ಚುನಾಯಿತ ಪ್ರತಿನಿಧಿ ಮತ್ತು 90ರ ದಶಕದಲ್ಲಿ ಬೆನಜೀರ್ ಭುಟ್ಟೋ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.