ADVERTISEMENT

ತಪ್ಪು ನಿರ್ಧಾರಗಳು ಸೋಲಿಗೆ ಕಾರಣ: ವಕಾರ್‌

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಎದುರು ಪಾಕ್‌ ಪರಾಭವ ಕುರಿತು ಹೇಳಿಕೆ

ಪಿಟಿಐ
Published 19 ಜೂನ್ 2020, 15:03 IST
Last Updated 19 ಜೂನ್ 2020, 15:03 IST
ವಕಾರ್‌ ಯೂನಿಸ್‌
ವಕಾರ್‌ ಯೂನಿಸ್‌   

ನವದೆಹಲಿ: ಹಲವು ತಪ್ಪು ನಿರ್ಧಾರಗಳು2019ರ ವಿಶ್ವಕಪ್‌ನಲ್ಲಿ ತಮ್ಮ ತಂಡ ಭಾರತದ ಎದುರು ಸೋಲಲು ಕಾರಣವಾದವು ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ವಕಾರ್‌ ಯೂನಿಸ್‌ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ ಟೂರ್ನಿಯ ಗುಂಪುಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 89 ರನ್‌ಗಳಿಂದ ಮಣಿಸಿತ್ತು. ಈ ಮೂಲಕ ಪಾಕ್‌ ತಂಡದ ಎದುರು ವಿಶ್ವಕಪ್‌ ಇತಿಹಾಸದಲ್ಲಿ ಅಜೇಯ ದಾಖಲೆಯನ್ನು (7–0) ಕಾಯ್ದುಕೊಂಡಿತ್ತು.

‘ಟಾಸ್‌ನಿಂದ ಆರಂಭಗೊಂಡು ಒಟ್ಟಾರೆಯಾಗಿ ನಮ್ಮ ತಂಡ ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿದ್ದವು. ಪಿಚ್‌ನ ಪರಿಸ್ಥಿಯ ಲಾಭ ನಮಗೆ ಲಭಿಸಲಿದ್ದು, ಆರಂಭದಲ್ಲೇ ವಿಕೆಟ್‌ ಕಿತ್ತು ಭಾರತದ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಬೇಕೆಂಬ ವಿಶ್ವಾಸದಲ್ಲಿ ಪಾಕ್‌ ತಂಡ ಇತ್ತು’ ಎಂದು ಗ್ಲೋಫ್ಯಾನ್ಸ್‌ ವೆಬ್‌ಸೈಟ್‌ ಆಯೋಜಿಸಿದ್ದ ಕ್ಯೂ20 ಎಂಬ ಸಂವಾದದಲ್ಲಿ ವಕಾರ್‌ ಹೇಳಿದ್ದಾರೆ.

ADVERTISEMENT

ಭಾರತ ಮತ್ತು ಪಾಕ್‌ ತಂಡಗಳ ಮಧ್ಯೆ ನಡೆದ ನಾಲ್ಕು ವಿಶ್ವಕಪ್‌ ಪಂದ್ಯಗಳಲ್ಲಿ ವಕಾರ್‌ ಆಡಿದ್ದಾರೆ.

‘ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌.ರಾಹುಲ್ (ಆ ಪಂದ್ಯದಲ್ಲಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 136 ರನ್‌ ಕಲೆಹಾಕಿದ್ದರು)‌ ಅವರನ್ನು ನಿಯಂತ್ರಿಸುವ ಮಾರ್ಗ ಪಾಕ್‌ ಬೌಲರ್‌ಗಳಿಗೆ ತಿಳಿಯಲಿಲ್ಲ. ಈ ಜೋಡಿಯು, ಪಾಕ್‌ ಬೌಲರ್‌ಗಳನ್ನು ಲಯ ಕಂಡುಕೊಳ್ಳಲು ಬಿಡಲಿಲ್ಲ. ಪಿಚ್‌ ಕೂಡಪಾಕ್ ಕೈ ಹಿಡಿಯಲಿಲ್ಲ. ರಾಹುಲ್‌–ರೋಹಿತ್‌ ಪೇರಿಸಿದ ರನ್‌ ಸೌಧ ಎದುರು ಪಾಕ್‌ ನಿರುತ್ತರವಾಯಿತು’ ಎಂದು ವಕಾರ್‌ ನುಡಿದರು.

ಭಾರತ–ಪಾಕ್‌ ವಿಶ್ವಕಪ್‌ನಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ಹಲವು ವೈಯಕ್ತಿಕ ಶ್ರೇಷ್ಠ ಇನಿಂಗ್ಸ್‌ಗಳು ಹೊರಹೊಮ್ಮಿವೆ. 2003ರಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಆಟ (98 ರನ್‌) ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದೆನಿಸಿಕೊಂಡಿದೆ’ ಎಂದೂ ವಕಾರ್‌ ಹೇಳಿದರು.

ಆ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಪರಾಭವಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.