ಗುವಾಹಟಿ: ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸುತ್ತಿರುವ ಭಾರತ ತಂಡವು ಶನಿವಾರ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಬಲಿಷ್ಠ ಬ್ಯಾಟರ್‌ಗಳ ಎದುರು ಭಾರತದ ಬೌಲಿಂಗ್ ಪಡೆಯು ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವ ಅವಕಾಶ ದೊರೆಯಲಿದೆ.
ಅಭ್ಯಾಸ ಪಂದ್ಯಗಳಲ್ಲಿ ತಂಡದ ಹನ್ನೊಂದು ಆಟಗಾರರನ್ನು ಕಣಕ್ಕಿಳಿಸುವ ನಿಯಮ ಸಡಿಲಿಸಲಾಗಿರುತ್ತದೆ. ಇದರಿಂದಾಗಿ ಎಲ್ಲ ಆಟಗಾರರನ್ನೂ ಪರೀಕ್ಷಿಸುವ ಅವಕಾಶ ಉಭಯ ತಂಡಗಳಿಗೆ ಸಿಗಲಿದೆ. ಇಂಗ್ಲೆಂಡ್ ಆಟಗಾರರಿಗೆ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲೂ ಇದರಿಂದ ಅವಕಾಶವಾಗಲಿದೆ.
ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಮೂರು ಮಾದರಿಗಳಲ್ಲಿಯೂ ಆಕ್ರಮಣಶೀಲ ಬ್ಯಾಟಿಂಗ್ ಮೂಲಕ ಎದುರಾಳಿಗಳ ನಿದ್ದೆಗೆಡಿಸಿದೆ.
ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್ಸ್, ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಆಲ್‌ರೌಂಡರ್ ಮೋಯಿನ್ ಅಲಿ ಅವರು ಟೆಸ್ಟ್ ಪಂದ್ಯಗಳಲ್ಲಿಯೂ ತಮ್ಮ ಬಿರುಸಿನ ಆಟವಾಡಿ ಗಮನ ಸೆಳೆದಿದ್ದಾರೆ. ಇಲ್ಲಿಯೂ ಅದೇ ತಂತ್ರಗಾರಿಕೆಯನ್ನು ಮುಂದುವರಿಸುವ ಸಾಧ್ಯತೆಗಳಿವೆ. ಅದನ್ನು ತಡೆಯುವ ಸವಾಲು ಭಾರತದ ಬೌಲರ್‌ಗಳಿಗೆ ಇದೆ.
ಇಂಗ್ಲೆಂಡ್ ತಂಡದಲ್ಲಿ ಎಂಟನೇ ಕ್ರಮಾಂಕದವರೆಗೂ ಬ್ಯಾಟರ್‌ಗಳು ಇದ್ದಾರೆ.
ರವೀಂದ್ರ ಜಡೇಜ, ಕುಲದೀಪ್ ಯಾದವ್ ಮತ್ತು ಆರ್. ಅಶ್ವಿನ್ ಅವರ ಸ್ಪಿನ್ ಬೌಲಿಂಗ್ ಎದುರಿಸುವ ಅಭ್ಯಾಸವೂ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಇಲ್ಲಿ ಆಗಲಿದೆ.
ಭಾರತದ ಬ್ಯಾಟರ್‌ಗಳ ಕ್ರಮಾಂಕ ಅಂತಿಮಗೊಳಿಸಲೂ ಅಭ್ಯಾಸ ಪಂದ್ಯ ಪರೀಕ್ಷಾ ಕಣವಾಗಲಿದೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲಿ ಯಾರಿಗೆ ಅವಕಾಶ ಸಿಗಬಹುದೆಂಬುದೂ ಇತ್ಯರ್ಥವಾಗಬಹುದು. ಜೊತೆಗೆ ನಾಯಕ ರೋಹಿತ್ ಶರ್ಮಾ ಅವರಿಗೂ ಲಯಕ್ಕೆ ಮರಳಲು ಈ ಪಂದ್ಯ ವೇದಿಕೆ ಒದಗಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.