ಬೆಂಗಳೂರು: ‘ಶೇನ್ ವಾರ್ನ್ ಅವರು ಕ್ರಿಕೆಟ್ ಕ್ರೀಡೆಯ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್. ಅಷ್ಟೇ ಚಾಣಾಕ್ಷ ಕ್ರಿಕೆಟಿಗ. ಅವರ ತಂತ್ರಗಾರಿಕೆಗಳು ಅತ್ಯಮೋಘವಾಗಿರುತ್ತಿದ್ದವು. ಆದರೆ ಅವರಿಗೆ ತಾವೆಷ್ಟು ಶ್ರೇಷ್ಠರು ಎಂಬ ಅರಿವು ಇರಲಿಲ್ಲ’–
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕೋಚ್ ಜಾನ್ ಬುಕನನ್ ಅವರು ಶೇನ್ ವಾರ್ನ್ ಅವರ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ ಇದು.
ತಮ್ಮ ವೃತ್ತಿಜೀವನದಲ್ಲಿ ಒಂದೂ ಟೆಸ್ಟ್ ಪಂದ್ಯವಾಡದ ಜಾನ್ ಬುಕನನ್ ಅವರು 1999ರಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ನೇಮಕವಾಗಿದ್ದರು. ಆ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಖ್ಯಾತನಾಮರ ದಂಡು ಇತ್ತು. ಅದರಲ್ಲಿ ಶೇನ್ ವಾರ್ನ್ ಅವರು ಯಶಸ್ಷಿನ ಉತ್ತುಂಗದಲ್ಲಿದ್ದ ಕಾಲವದು. ವಾರ್ನ್ ತಂಡದಲ್ಲಿದ್ದು ಏಳು ವರ್ಷಗಳೇ ಸಂದಿದ್ದವು. ಬುಕನನ್ ಅವರು ಡೇಟಾ ಮತ್ತು ಅನಾಲಿಸಿಸ್ ಪದ್ಧತಿಗಳನ್ನು ತಮ್ಮ ತರಬೇತಿಯಲ್ಲಿ ಅಳವಡಿಸಿಕೊಂಡಿದ್ದರು. ಆದರೆ ವಾರ್ನ್ ಆಗ ಯಾರ ಮಾತೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇದರ ಬಿಸಿ ಬುಕನನ್ ಅವರಿಗೂ ತಟ್ಟಿತ್ತು. ಆದರೆ ಬುಕನನ್ ಮಾರ್ಗದರ್ಶನದಲ್ಲಿ ತಂಡವು ಮೂರು ಸಲ ಏಕದಿನ ವಿಶ್ವಕಪ್ ಜಯಿಸಿತ್ತು.
ಬುಧವಾರ ಬೆಂಗಳೂರಿನಲ್ಲಿ ‘ರೆಡಿ ಸ್ಟೆಡಿ ಗೋ ಕಿಡ್ಸ್’ ಗ್ರಾಸ್‌ರೂಟ್ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. 1.5 ರಿಂದ 7 ವರ್ಷದೊಳಗಿನ ಮಕ್ಕಳಿಗಾಗಿ ಬಹುಶೀಸ್ತಿಯ ಕ್ರೀಡಾ ಯೋಜನೆ ಇದಾಗಿದೆ. ಸ್ಪೋರ್ಟ್ಸ್ ಗುರುಕುಲ್ ಮತ್ತು ಗ್ಲೋಬಲ್ ವೆಂಚರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಇದರ ಸಂಸ್ಥಾಪಕರಾಗಿದ್ದಾರೆ. ಬುಕನನ್ ಈ ಯೋಜನೆಗೆ ಭಾರತದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುವರು. ಈ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ತಾವು ಕೋಚ್ ಆಗಿ ಕಾರ್ಯನಿರ್ವಹಿಸಿದ ದಿನಗಳನ್ನು ನೆನಪಿಸಿಕೊಂಡರು.
‘ನನ್ನ ಮತ್ತು ವಾರ್ನ್ ಅವರದ್ದು ವಿಭಿನ್ನ ಹಿನ್ನೆಲೆಗಳು. ಅವರ ಯೋಚನಾಲಹರಿಯೂ ಹಳೆಯ ಮಾದರಿಯದ್ದು. ತಂಡದ ಆಟಗಾರರಿಗೆ ಅವಶ್ಯಕವಾಗಿರುವುದನ್ನು ಒದಗಿಸಲಷ್ಟೇ ಕೋಚ್‌ಗಳು ಇರುವುದು ಎಂಬ ಭಾವನೆಯಿತ್ತು. ಆ ಹಂತದಲ್ಲಿ ಕ್ರಿಕೆಟ್ ಬಹಳಷ್ಟು ಕಠಿಣ ಸವಾಲುಗಳೊಂದಿಗೆ ಪ್ರಗತಿಯಾಗುತ್ತಿತ್ತು. ಅದನ್ನು ಅರ್ಥ ಮಾಡಿಕೊಂಡು ಪರಿಹಾರ ಕಾಣಲು ನಾನು ದತ್ತಾಂಶ ಮತ್ತು ವಿಶ್ಲೇಷಣೆಗಳನ್ನು ಬಳಸಿಕೊಳ್ಳುತ್ತಿದ್ದೆ. ಆದರೆ ಇದು ವಾರ್ನ್ ಅವರಿಗೆ ಸೇರುತ್ತಿರಲಿಲ್ಲ. ವೇಗಿ ಗ್ಲೆನ್ ಮೆಕ್‌ಗ್ರಾ ಅವರೂ ಅದೇ ರೀತಿಯ ವ್ಯಕ್ತಿಯಾಗಿದ್ದರು‘ ಎಂದು ಸ್ಮರಿಸಿದರು.
‘ಆ ಸಂದರ್ಭದಲ್ಲಿ ವಾರ್ನ್ ಅವರಿಗೆ ಸವಾಲೊಡ್ಡುವ ಕೆಲಸ ನನ್ನದಾಗಿತ್ತು. ಅದನ್ನು ಜಿದ್ದಿನಂತೆ ಸ್ವೀಕರಿಸುತ್ತಿದ್ದ ಅವರು ತಮ್ಮಲ್ಲಿದ್ದ ಶ್ರೇಷ್ಠವಾದ ಆಟವನ್ನು ಪಣಕ್ಕೊಡ್ಡುತ್ತಿದ್ದರು. ಅದರ ಲಾಭ ತಂಡಕ್ಕೆ ಆಗುತ್ತಿತ್ತು. ಒಬ್ಬ ಕ್ರಿಕೆಟಿಗನಾಗಿ ಅವರನ್ನು ಅಪಾರವಾಗಿ ಗೌರವಿಸುತ್ತೇನೆ’ ಎಂದೂ ಬುಕನನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.