ADVERTISEMENT

ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಶೇನ್ ವಾರ್ನ್ ನೆರವು ನೆನಪಿಸಿಕೊಂಡ ಮ್ಯಾಕ್ಸ್‌ವೆಲ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 16:12 IST
Last Updated 8 ಮಾರ್ಚ್ 2023, 16:12 IST
ಗ್ಲೆನ್ ಮ್ಯಾಕ್ಸ್‌ವೆಲ್ 
ಗ್ಲೆನ್ ಮ್ಯಾಕ್ಸ್‌ವೆಲ್    

ಬೆಂಗಳೂರು: ಆಸ್ಟ್ರೇಲಿಯಾದ ಸ್ಫೋಟಕ ಶೈಲಿಯ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಹಿಂದೆ ತಾವು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೀಡಿದ ನೆರವನ್ನು ನೆನಪಿಸಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್‌ನಲ್ಲಿ ಪ್ರತಿನಧಿಸುತ್ತಿರುವ ಮ್ಯಾಕ್ಸ್‌ವೆಲ್, ‘ಶೇನ್ ವಾರ್ನ್‌ಗೆ ಇನ್ನೊಬ್ಬರ ಮನಸ್ಸನ್ನು ಪ್ರಭಾವಿಸುವ ಶಕ್ತಿಯಿತ್ತು. ಆ ಮೂಲಕ ಅವರು ಕಷ್ಟದಲ್ಲಿರುವವರಲ್ಲಿ ಧೈರ್ಯ ತುಂಬುತ್ತಿದ್ದರು. ಮರಳಿ ಆತ್ಮವಿಶ್ವಾಸ ಗಳಿಸುವಂತೆ ಮಾಡುತ್ತಿದ್ದರು’ ಎಂದರು.

‘ನನಗೆ ಗೊತ್ತಿರುವ ಅತ್ಯಂತ ವಿಶ್ವಾಸಾರ್ಹ ಹಾಗೂ ನೆರವು ನೀಡುವಂತಹ ವ್ಯಕ್ತಿಯಾಗಿದ್ದವರು ವಾರ್ನ್. ಅವರು ತಾವು ಮಾಡುತ್ತಿದ್ದ ಸಾಮಾಜಿಕ ಸೇವೆಯಲ್ಲಷ್ಟೇ ಅಲ್ಲ. ಪ್ರಾಮಾಣಿಕವಾಗಿದ್ದರು. ಉದಾರಿಗಳೂ ಆಗಿದ್ದರು’ ಎಂದು ಆರ್‌ಸಿಬಿ ಸೀಸನ್ 2 ಪಾಡ್‌ಕಾಸ್ಟ್‌ನಲ್ಲಿ ಮ್ಯಾಕ್ಸ್‌ವೆಲ್ ನೆನಪಿಸಿಕೊಂಡಿದ್ದಾರೆ.

ADVERTISEMENT

ಸ್ಪಿನ್ ಬೌಲಿಂಗ್ ದಂತಕಥೆ ಶೇನ್ ವಾರ್ನ್ ಹೋದ ವರ್ಷ ಥಾಯ್ಲೆಂಡ್‌ನಲ್ಲಿ ಹೃದಯಸ್ತಂಭನದಿಂದ ಮೃತಪಟ್ಟಿದ್ದರು.

‘ಯುವ ಸ್ಪಿನ್‌ ಬೌಲರ್‌ಗಳನ್ನು ನೆಟ್ಸ್‌ನಲ್ಲಿ ಭೇಟಿಯಾಗುತ್ತಿದ್ದ ವಾರ್ನ್ ಕೌಶಲಗಳನ್ನು ಹೇಳಿಕೊಡುತ್ತಿದ್ದರು. ಉದಯೋನ್ಮುಖರೊಂದಿಗೆ ಬೆರೆಯುತ್ತಿದ್ದರು. ಅವರೊಂದಿಗೆ ಮುಕ್ತವಾಗಿ ಚರ್ಚಿಸುತ್ತಿದ್ದರು. ಸ್ವಲ್ಪ ಸಮಯದಲ್ಲಿಯೇ ಅವರು ಚಿಕ್ಕವರೊಂದಿಗೂ ಒಳ್ಳೆಯ ಸ್ನೇಹಿತರಾಗಿ ಬಿಡುತ್ತಿದ್ದರು. ಇದರಿಂದಾಗಿ ಯುವ ಆಟಗಾರರ ಆತ್ಮವಿಶ್ವಾಸ ವೃದ್ಧಿಸುತ್ತಿತ್ತು. ಅಲ್ಲದೇ ಕೌಶಲಗಳೂ ಸುಧಾರಣೆಯಾಗುತ್ತಿದ್ದವು’ ಎಂದು ಹೇಳಿದರು.

‘ನಾನು ಅದೃಷ್ಟವಂತ. ಯಾಕೆಂದರೆ ವಾರ್ನ್ ಜೊತೆಗೆ ಕ್ರಿಕೆಟ್ ಅಷ್ಟೇ ಅಲ್ಲ ಗಾಲ್ಫ್ ಆಡುವ ಅವಕಾಶವೂ ನನಗೆ ಲಭಿಸಿತ್ತು. ಆದ್ದರಿಂದ ಮಾತುಕತೆಗೆ ಬಹಳಷ್ಟು ಸಮಯ ಸಿಗುತ್ತಿತ್ತು. ಅಲ್ಲದೇ ಅಗತ್ಯವಿದ್ದಾಗಲೆಲ್ಲ ಫೋನ್ ಮೂಲಕವೂ ಮಾತಾಡುತ್ತಿದ್ದೆವು. ನನ್ನನ್ನು ಕಂಡಾಗಲೆಲ್ಲ ತಾವೇ ಬಳಿ ಸಾರಿ ಬಂದು ಚುಟುಕಾಗಿಯಾದರೂ ಮಾತನಾಡಿ ಹೋಗುತ್ತಿದ್ದರು. ಆ ಮಾತುಗಳಲ್ಲಿ ನನ್ನ ಆಟ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಸಲಹೆಗಳೂ ಇರುತ್ತಿದ್ದವು ಎಂಬುದು ವಿಶೇಷ’ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

‘ಅವರನ್ನು ನಾಲ್ಕನೇ ಸಲ ಭೇಟಿಯಾದಾಗ ನಾನು ಸಂಪೂರ್ಣವಾಗಿ ಮುಕ್ತವಾಗಿ ಮಾತನಾಡಿದೆ. ಎಲ್ಲ ವಿಷಯಗಳನ್ನೂ ಹೇಳಿಕೊಂಡೆ. ಅದಕ್ಕವರು ನಿರುಮ್ಮಳವಾಗಿರು. ಒತ್ತಡ ಮಾಡಿಕೊಳ್ಳಬೇಡ. ಎಲ್ಲವನ್ನೂ ಸರಳವಾಗಿ ತೆಗೆದುಕೊ. ವಿರಾಮ ತೆಗೆದುಕೊಂಡು ನಿನಗೆ ಇಷ್ಟವಾಗಿರುವುದನ್ನು ಮಾಡಿ ಮುಗಿಸು. ನಿನಗಾಗಿ ನಾನು ಯಾವಾಗಲೂ ಇಲ್ಲಿದ್ದೇನೆಂದು ವಾರ್ನ್ ಹೇಳಿದ್ದರು’ ಎಂದು ಮ್ಯಾಕ್ಸ್‌ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.