ADVERTISEMENT

ಅಶಿಸ್ತು ತೋರಿದ್ದ ವಾರ್ನರ್‌ ಅವರನ್ನು ತಂಡದಿಂದ ಹೊರಗಟ್ಟಲಾಗಿತ್ತು: ಸೆಹ್ವಾಗ್

ಐಎಎನ್ಎಸ್
Published 7 ಮೇ 2022, 10:35 IST
Last Updated 7 ಮೇ 2022, 10:35 IST
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್   

ಮುಂಬೈ: ಐಪಿಎಲ್‌‌ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದಾಗ ಅಶಿಸ್ತಿನ ವರ್ತನೆಗಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಹೊರಗಟ್ಟಲಾಗಿತ್ತು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

2009ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಪದಾರ್ಪಣೆ ಮಾಡಿದ್ದ ವಾರ್ನರ್ ಐದು ವರ್ಷಗಳ ಕಾಲ ಆಡಿದ್ದರು. ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿದ್ದರು.

ಡೆಲ್ಲಿ ತಂಡದಲ್ಲಿದ್ದಾಗ ಅಶಿಸ್ತಿನ ವರ್ತನೆಗಾಗಿ ವಾರ್ನರ್ ಮೇಲೆ ಕೋಪಗೊಂಡಿದ್ದಾಗಿ ಸೆಹ್ವಾಗ್ ತಿಳಿಸಿದ್ದಾರೆ.

'2009ರಲ್ಲಿ ವಾರ್ನರ್ ಅಭ್ಯಾಸದ ಬದಲು ಪಾರ್ಟಿಗಳಲ್ಲಿ ಹೆಚ್ಚು ನಂಬಿಕೆ ಇರಿಸಿದ್ದರು. ಮೊದಲ ವರ್ಷದಲ್ಲಿ ಕೆಲವು ಆಟಗಾರರೊಂದಿಗೆ ಜಗಳವಾಡಿದ ಕಾರಣ ಕೊನೆಯ ಎರಡು ಪಂದ್ಯಗಳಲ್ಲಿ ಅವಕಾಶ ನೀಡದೆ ಮನೆಗೆ ಕಳುಹಿಸಿದ್ದೆ' ಎಂದು ಹೇಳಿದ್ದಾರೆ.

'ಕೆಲವೊಮ್ಮೆ ಪಾಠ ಕಲಿಸಲು ತಂಡದಿಂದ ಹೊರಗಟ್ಟಬೇಕಾಗುತ್ತದೆ. ಅವರು (ವಾರ್ನರ್) ಹೊಸ ಆಟಗಾರನಾಗಿದ್ದರಿಂದ ತಂಡಕ್ಕೆ ನೀವು ಮುಖ್ಯವಲ್ಲ ಎಂಬ ಸಂದೇಶ ನೀಡುವುದು ಅಗತ್ಯವೆನಿಸಿತ್ತು. ನಿಮ್ಮ ಸ್ಥಾನದಲ್ಲಿ ಇತರೆ ಆಟಗಾರರು ಆಡಲು ಸಮರ್ಥರು. ಬಳಿಕ ವಾರ್ನರ್ ಅವರನ್ನು ಹೊರಗಿರಿಸಿ ಪಂದ್ಯವನ್ನು ಗೆದ್ದಿದ್ದೆವು' ಎಂದು ತಿಳಿಸಿದ್ದಾರೆ.

2016ರಲ್ಲಿ ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಚೊಚ್ಚಲ ಟ್ರೋಫಿ ಜಯಿಸಿತ್ತು. ಆದರೆ 2021ರಲ್ಲಿ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತಲ್ಲದೆ ಹನ್ನೊಂದರ ಬಳಗದಲ್ಲೂ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ಹೈದರಾಬಾದ್ ತೆಗೆದುಕೊಂಡಿದ್ದ ನಿರ್ಧಾರ ಸರಿಯಾಗಿರಲಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.

'ಸತತವಾಗಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ನೀವು ಹೊರಗಿರಿಸಿದರೆ ಅದು ತಪ್ಪು. ಇದರಿಂದ ತಂಡದ ಸಂಯೋಜನೆ ತಪ್ಪುತ್ತದೆ. ಅಲ್ಲದೆ ತಪ್ಪು ಸಂದೇಶವನ್ನು ನೀಡುತ್ತದೆ. ವಾರ್ನರ್ ಮಾಡಿದ ತಪ್ಪೇನು? ಆಯ್ಕೆಗಾರರು, ಟೀಮ್ ಮ್ಯಾನೇಜ್‌ಮೆಂಟ್ ಅವರನ್ನು ಕೈಬಿಟ್ಟರು. ವಾರ್ನರ್ ತಪ್ಪಾಗಿ ಏನೂ ಹೇಳಿರಲಿಲ್ಲ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.