ADVERTISEMENT

AUS vs PAK: ವಿದಾಯ ಟೆಸ್ಟ್‌ನಲ್ಲಿ ಮಿಂಚಿದ ಡೇವಿಡ್‌ ವಾರ್ನರ್

ಆಸ್ಟ್ರೇಲಿಯಾಕ್ಕೆ 8 ವಿಕೆಟ್ ಜಯ, 3–0 ಸರಣಿ

ಏಜೆನ್ಸೀಸ್
Published 6 ಜನವರಿ 2024, 12:44 IST
Last Updated 6 ಜನವರಿ 2024, 12:44 IST
<div class="paragraphs"><p>ಡೇವಿಡ್‌ ವಾರ್ನರ್‌ ( ಸಂಗ್ರಹ ಚಿತ್ರ )</p></div>

ಡೇವಿಡ್‌ ವಾರ್ನರ್‌ ( ಸಂಗ್ರಹ ಚಿತ್ರ )

   

ಸಿಡ್ನಿ: ಡೇವಿಡ್‌ ವಾರ್ನರ್‌ 57 ರನ್‌ ಹೊಡೆದು, ತಮ್ಮ ವಿದಾಯದ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಎಂಟು ವಿಕೆಟ್‌ಗಳಿಂದ ಪಾಕಿಸ್ತಾನ ತಂಡದ ಮೇಲೆ ಜಯಗಳಿಸಲು ನೆರವಾದರು. 112 ಟೆಸ್ಟ್‌ ಪಂದ್ಯಗಳ ಜೀವನವನ್ನು ತವರು ನೆಲ– ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ (ಎಸ್‌ಸಿಜಿ) ಗೆಲುವಿನೊಡನೆ ಅಂತ್ಯಗೊಳಿಸಿದರು.

ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಶನಿವಾರ ತಂಡ ಗೆಲ್ಲಲು 12 ರನ್ ಬೇಕಿದ್ದಾಗ ಅವರು ಸಾಜಿದ್ ಖಾನ್‌ ಬೌಲಿಂಗ್‌ನಲ್ಲಿ ಎಲ್‌ಬಿ ತೀರ್ಪನ್ನು ಪಡೆದರು. 75 ಎಸೆತಗಳ ಇನಿಂಗ್ಸ್‌ನಲ್ಲಿ ಏಳು ಬೌಂಡರಿಗಳಿದ್ದವು. ಪ್ರೇಕ್ಷಕರ ಹರ್ಷೋದ್ಗಾರಗಳಿಗೆ ಕೈಬೀಸಿ ಪ್ರತಿಕ್ರಿಯಿಸಿದರು.

ADVERTISEMENT

ಇದಕ್ಕೆ ಮೊದಲು ಶುಕ್ರವಾರ 7 ವಿಕೆಟ್‌ಗೆ 68 ರನ್‌ ಗಳಿಸಿದ್ದ ಪಾಕಿಸ್ತಾನ 115 ರನ್‌ಗಳಿಗೆ ಆಲೌಟ್‌ ಆಯಿತು. ಮೊಹಮ್ಮದ್ ರಿಜ್ವಾನ್ (28) ಮತ್ತು ಅಮೀರ್ ಜಮಾಲ್ (18) ಕೆಲಕಾಲ ಪ್ರತಿರೋಧ ತೋರಿಸಿ ಎಂಟನೇ ವಿಕೆಟ್‌ಗೆ 42 ರನ್ ಸೇರಿಸಿದ್ದರು. ಈ ಜೊತೆಯಾಟವನ್ನು ಮುರಿದಿದ್ದು ಸ್ಪಿನ್ನರ್ ನೇಥನ್‌ ಲಯನ್ (36ಕ್ಕೆ3). ನಂತರ ಅವರು ಹಸನ್ ಅಲಿ ಅವರನ್ನು ಬೌಲ್ಡ್‌ ಮಾಡಿ ಪ್ರವಾಸಿ ತಂಡದ ಪತನ ತ್ವರಿತಗೊಳಿಸಿದರು.

ಗೆಲುವಿಗೆ ಬೇಕಾಗಿದ್ದ 130 ರನ್‌ಗಳ ಗುರಿ ಎದುರಿಸಿದ ಆಸ್ಟ್ರೇಲಿಯಾ ಖ್ವಾಜಾ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ಆದರೆ ವಾರ್ನರ್ ಮತ್ತು ಲಾಬುಷೇನ್ (ಔಟಾಗದೇ 62, 73ಎ, 9x4) ಎರಡನೇ ವಿಕೆಟ್‌ಗೆ 119 ರನ್ ಸೇರಿಸಿ ತಂಡವನ್ನು ವಿಜಯಪಥದಲ್ಲಿ ಮುನ್ನಡೆಸಿದರು. ಸ್ಮಿತ್‌ ಔಟಾಗದೇ ನಾಲ್ಕು ರನ್ ಗಳಿಸಿದ್ದು, ತಂಡ 2 ವಿಕೆಟ್‌ಗೆ 130 ರನ್ ಹೊಡೆಯಿತು.

ಆಲ್‌ರೌಂಡ್ ಆಟವಾಡಿದ್ದ ಪಾಕಿಸ್ತಾನ ಆಟಗಾರ ಅಮೀರ್ ಜಮಾಲ್ ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರೆ, ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ಸ್ಕೋರುಗಳು:

ಮೊದಲ ಇನಿಂಗ್ಸ್‌: ಪಾಕಿಸ್ತಾನ: 313, ಆಸ್ಟ್ರೇಲಿಯಾ: 299 ಎರಡನೆ ಇನಿಂಗ್ಸ್‌: ಪಾಕಿಸ್ತಾನ: 43.1 ಓವರುಗಳಲ್ಲಿ 115 (ರಿಜ್ವಾನ್ 28; ಹ್ಯಾಜಲ್‌ವುಡ್‌ 16ಕ್ಕೆ4, ನೇಥನ್ ಲಯನ್ 36ಕ್ಕೆ3); ಆಸ್ಟ್ರೇಲಿಯಾ: 25.5 ಓವರುಗಳಲ್ಲಿ 2 ವಿಕೆಟ್‌ಗೆ 130 (ವಾರ್ನರ್‌ ಔಟಾಗದೇ 57, ಮಾರ್ನಸ್ ಲಾಬುಷೇನ್ ಔಟಾಗದೇ 62; ಸಾಜಿದ್ ಖಾನ್ 49ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.