ಕೇಪ್‌ಟೌನ್: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಆತಿಥೇಯ ತಂಡದ ನಾಯಕ ಡೀನ್ ಎಲ್ಗರ್ ಅವರ ಪಾಲಿಗೆ ಇದು ವೃತ್ತಿ ಜೀವನದ ಕೊನೇ ಟೆಸ್ಟ್ ಪಂದ್ಯವಾಗಿದೆ.
ಮೊದಲ ಟೆಸ್ಟ್‌ನಲ್ಲಿ ಅಮೋಘ ಶತಕ (185 ರನ್) ಬಾರಿಸಿ ತಂಡದ ಜಯಕ್ಕೆ ಕಾರಣರಾಗಿದ್ದ ಎಲ್ಗರ್, ಎರಡನೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ 4 ರನ್ ಗಳಿಸಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ 12 ರನ್ ಗಳಿಸಿದ್ದಾಗ ಮುಕೇಶ್ ಕುಮಾರ್ ಬೌಲಿಂಗ್‌ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಈ ವೇಳೆ ಸಂಭ್ರಮ ಆಚರಿಸದಂತೆ ಸಹ ಆಟಗಾರರು ಮತ್ತು ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಮನವಿ ಮಾಡಿದ ಕೊಹ್ಲಿ, ಎಲ್ಗರ್‌ಗೆ ತಲೆಬಾಗಿ ಗೌರವ ಸೂಚಿಸಿದರು.
ಬಳಿಕ ಎಲ್ಗರ್ ಅವರತ್ತ ಓಡಿಹೋಗಿ, ಅಪ್ಪಿಕೊಂಡು ವಿದಾಯ ಹೇಳಿದರು.
ಕೊಹ್ಲಿಯ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಭಾರತದ ಹಿಡಿತದಲ್ಲಿ ಪಂದ್ಯ
ಬುಧವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 55 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ, 153 ರನ್ ಗಳಿಸಿ ಆಲೌಟ್ ಆಗಿದೆ.
98 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಆಫ್ರಿಕಾ, ಸದ್ಯ 7 ವಿಕೆಟ್‌ಗಳನ್ನು ಕಳೆದುಕೊಂಡು 128 ರನ್ ಗಳಿಸಿದೆ.
ಜಸ್‌ಪ್ರಿತ್ ಬೂಮ್ರಾ ಮತ್ತು ಮುಕೇಶ್ ಕುಮಾರ್ ಕ್ರಮವಾಗಿ 5 ಹಾಗೂ 2 ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.