ADVERTISEMENT

ದುಬೈನಿಂದ ತಂದ ವಾಚ್‌ಗೆ ₹5 ಕೋಟಿ ಅಲ್ಲ, ಒಂದೂವರೆ ಕೋಟಿ ಎಂದ ಹಾರ್ದಿಕ್‌ ಪಾಂಡ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2021, 5:10 IST
Last Updated 16 ನವೆಂಬರ್ 2021, 5:10 IST
ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ    

ಮುಂಬೈ: ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಅವರಿಗೆ ಸೇರಿದ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಎರಡು ಕೈಗಡಿಯಾರಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಆದರೆ, ತಾನಾಗಿಯೇ ವಿಮಾನ ನಿಲ್ದಾಣದ ಕಸ್ಟಮ್ಸ್‌ ಇಲಾಖೆಗೆ ಕೈಗಡಿಯಾರಗಳನ್ನು ಕೊಟ್ಟಿರುವುದಾಗಿ ಪಾಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದುಬೈನಿಂದ ಮುಂಬೈಗೆ ಮರಳಿದ್ದ ಹಾರ್ದಿಕ್‌ ಪಾಂಡ್ಯ ಅವರು ದುಬಾರಿ ಬೆಲೆಯ ಎರಡು ಕೈಗಡಿಯಾರಗಳನ್ನು ತಂದಿದ್ದರು ಹಾಗೂ ಅವುಗಳಿಗೆ ರಸೀದಿ ಇರಲಿಲ್ಲ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಹೋರಾಟ ಮುಗಿಸಿದ ಭಾರತದ ತಂಡದ ಆಟಗಾರರು ದೇಶಕ್ಕೆ ಮರಳಿದ್ದಾರೆ. ಪಾಂಡ್ಯ ಅವರು ಭಾನುವಾರ ತಡ ರಾತ್ರಿ ಮುಂಬೈಗೆ ಬಂದಿಳಿದರು. ಕಸ್ಟಮ್ಸ್‌ ಅಧಿಕಾರಿಗಳು ಕೈಗಡಿಯಾರಗಳನ್ನು ವಶಕ್ಕೆ ಪಡೆದಿರುವುದನ್ನು ಅಲ್ಲಗಳೆದಿರುವ ಹಾರ್ದಿಕ್‌ ಪಾಂಡ್ಯ, ತಮ್ಮ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

'ದುಬೈನಿಂದ ಸೋಮವಾರ ಬೆಳಗಿನಜಾವ ಬಂದಿಳಿದು, ನನ್ನ ಲಗೇಜ್‌ ತೆಗೆದುಕೊಂಡು ಸ್ವತಃ ನಾನೇ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್‌ ಕೌಂಟರ್‌ನತ್ತ ಸಾಗಿದೆ. ನಾನು ತಂದಿರುವ ವಸ್ತುಗಳಿಗೆ ಸೀಮಾ ಸುಂಕ ಪಾವತಿಸುವ ಸಲುವಾಗಿಯೇ ಅಲ್ಲಿಗೆ ಹೋದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಗ್ರಹಿಕೆ ಹರಿದಾಡುತ್ತಿದೆ. ಆ ಕುರಿತು ಸ್ಪಷ್ಟನೆ ನೀಡುತ್ತಿದ್ದೇನೆ' ಎಂದು ಪ್ರಕಟಿಸಿದ್ದಾರೆ.

ದುಬೈನಿಂದ ಖರೀದಿಸಿ ತಂದಿರುವ ಎಲ್ಲ ವಸ್ತುಗಳ ಮಾಹಿತಿಯೂ ನೀಡಿದ್ದೇನೆ. ಪಾವತಿಸಬೇಕಿರುವ ಸೀಮಾ ಸುಂಕವನ್ನು ಪಾವತಿಸುತ್ತೇನೆ. ಖರೀದಿಯ ಬಗ್ಗೆ ಎಲ್ಲ ದಾಖಲೆಗಳನ್ನು ನೀಡುವಂತೆ ಕಸ್ಟಮ್ಸ್‌ ಅಧಿಕಾರಿಗಳು ಕೇಳಿದ್ದಾರೆ, ಅವುಗಳನ್ನು ಒದಗಿಸಿದ್ದೇನೆ ಎಂದಿದ್ದಾರೆ.

ಹಾಗೇ ಕೈಗಡಿಯಾರದ ಬೆಲೆ ₹5 ಕೋಟಿ ಅಲ್ಲ, ಸುಮಾರು ಒಂದೂವರೆ ಕೋಟಿ ರೂಪಾಯಿ ಎಂದು ಸ್ಪಷ್ಟಪಡಿಸಿದ್ದಾರೆ.

'ನಾನು ದೇಶದ ಕಾನೂನು ಪಾಲಿಸುವ ಪ್ರಜೆಯಾಗಿದ್ದು, ಸರ್ಕಾರದ ಎಲ್ಲ ಏಜೆನ್ಸಿಗಳನ್ನೂ ಗೌರವಿಸುತ್ತೇನೆ. ಮುಂಬೈ ಕಸ್ಟಮ್ಸ್‌ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ಸಿಕ್ಕಿದೆ ಹಾಗೂ ಅವರಿಗೆ ನನ್ನಿಂದ ಅಗತ್ಯವಿರುವ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ' ಎಂದು ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.