ADVERTISEMENT

ರಾಹುಲ್ ದ್ರಾವಿಡ್ ನೋಡಿ ಆಟ ಬದಲಿಸಿದೆ: ಕೆ.ಎಲ್. ರಾಹುಲ್

ಪಿಟಿಐ
Published 13 ನವೆಂಬರ್ 2024, 19:30 IST
Last Updated 13 ನವೆಂಬರ್ 2024, 19:30 IST
ಕೆ.ಎಲ್. ರಾಹುಲ್ 
ಕೆ.ಎಲ್. ರಾಹುಲ್    

ಮುಂಬೈ: ‘ನಾನು ಕ್ರಿಕೆಟ್ ಆಡಲು ಆರಂಭಿಸಿದ ದಿನಗಳಲ್ಲಿ ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದೆ. ನನ್ನ ಸ್ವಭಾವಕ್ಕೆ ವಿರುದ್ಧವಾಗಿದ್ದನ್ನೇ ಮಾಡಲು ಯತ್ನಿಸಿದ್ದೆ. ಆದರೆ, ರಾಹುಲ್ ದ್ರಾವಿಡ್ ಅವರನ್ನು ಐಪಿಎಲ್ ಟೂರ್ನಿಯೊಂದರಲ್ಲಿ ಆಡುವುದನ್ನು ನೋಡಿದ ಮೇಲೆ ಬದಲಾದೆ. ಅವರು ನಿಜವಾಗಲೂ ಶ್ರೇಷ್ಠ ಬ್ಯಾಟರ್‌’ ಎಂದು ಭಾರತ ತಂಡದ ಬ್ಯಾಟರ್ ಕೆ.ಎಲ್. ರಾಹುಲ್ ಹೇಳಿದ್ದಾರೆ. 

‘2011 ಅಥವಾ 2012ರಲ್ಲಿ ಇರಬೇಕು. ಐಪಿಎಲ್ ಆವೃತ್ತಿಯೊಂದರಲ್ಲಿ ದ್ರಾವಿಡ್ ಅವರ ಬ್ಯಾಟಿಂಗ್ ಶೈಲಿ, ತಾಂತ್ರಿಕ ಕೌಶಲಗಳು ನಿಖರವಾಗಿದ್ದವು. ಏಕದಿನ ಮತ್ತು ಟಿ20 ಕ್ರಿಕೆಟ್‌ಗಳಲ್ಲಿಯೂ ಅವರು ಅದೇ ತಾಂತ್ರಿಕ ಕೌಶಲಗಳನ್ನು ಬಳಸಿಕೊಂಡು ಯಶಸ್ವಿಯಾದವರು. ತಮ್ಮ ಆಟದಲ್ಲಿ ಯಾವುದೇ ಕೌಶಲವನ್ನೂ ಬದಲಿಸಿದವರಲ್ಲ. ಅದಕ್ಕೆ ಅವರು ಶ್ರೇಷ್ಠ ಬ್ಯಾಟರ್’ ಎಂದು ರಾಹುಲ್ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯ ಸಂದರ್ಶನದಲ್ಲಿ ಹೇಳಿದರು. 

32 ವರ್ಷದ ರಾಹುಲ್ ಅವರು 53 ಟೆಸ್ಟ್, 77 ಏಕದಿನ ಮತ್ತು 72 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕರ್ನಾಟಕದವರೇ ಆದ ದ್ರಾವಿಡ್ ಅವರಲ್ಲದೇ  ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರ ಆಟದಿಂದಲೂ ಕಲಿತಿರುವುದಾಗಿ ಹೇಳಿದ್ದಾರೆ. ರಾಹುಲ್ ಅವರು ವಿಲಿಯಮ್ಸನ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದರು. 

ADVERTISEMENT

‘ನಾನು ಸನ್‌ರೈಸರ್ಸ್ ತಂಡದಲ್ಲಿದ್ದಾಗ ಕೇನ್ ವಿಲಿಯಮ್ಸನ್ ಅವರೊಂದಿಗೆ ಬಹಳಷ್ಟು ಸಮಯ ಕಳೆದಿರುವೆ. ಇಲ್ಲಿದ್ದಾಗ ಕಣಕ್ಕಿಳಿಯಲು ಹೆಚ್ಚು ಅವಕಾಶಗಳು ಅವರಿಗೆ ಲಭಿಸುತ್ತಿರಲಿಲ್ಲ. ಆದರೂ ಅವರು ಮರಳಿ ತಮ್ಮ ದೇಶದ ತಂಡಕ್ಕೆ ಹೋದಾಗ ಶ್ವೇತ ಚೆಂಡಿನ ಕ್ರಿಕೆಟ್‌ನಲ್ಲಿ ಅಮೋಘವಾಗಿ ಅಡುತ್ತಿದ್ದರು. ದ್ರಾವಿಡ್ ಮತ್ತು ವಿಲಿಯಮ್ಸನ್ ಅವರಿಬ್ಬರನ್ನೂ ನೋಡಿದಾಗ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಬೇಕಾದರೆ ನನ್ನಲ್ಲಿರುವ ಸಾಮರ್ಥ್ಯದ ಅರಿವಾಯಿತು. ಹೆಚ್ಚು ಕಠಿಣ ಶ್ರಮ ಹಾಕುವುದಕ್ಕೆ ಬದಲಾಗಿ ನನ್ನಲ್ಲಿರುವ ದೈವದತ್ತವಾದ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡರೆ ಸಾಕೆನಿಸಿತು’ ಎಂದು ಹೇಳಿದರು. 

ರಾಹುಲ್ ಅವರು 2013ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಿದರು. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 

‘ಟಿ20 ಮಾದರಿಯ ಶ್ರೇಷ್ಠ ಆಟಗಾರರಾದ ವಿರಾಟ್ ಮತ್ತು ಎಬಿ (ಎಬಿ ಡಿವಿಲಿಯರ್ಸ್) ಅವರ ಮಾರ್ಗದರ್ಶನ ನನಗೆ ಲಭಿಸಿತು. 2016ರಲ್ಲಿ ಅವರೊಂದಿಗಿನ ಒಡನಾಟ ಮತ್ತು ಮಾತುಕತೆಗಳಿಂದ ಬಹಳಷ್ಟು ಕಲಿಕೆ ಸಾಧ್ಯವಾಯಿತು. ಅವರ ಸಲಹೆಗಳು ಮತ್ತು ತರಬೇತಿಯಿಂದಾಗಿ ನನ್ನ ಆಟದಲ್ಲಿ ಮಹತ್ವದ ಬದಲಾವಣೆಗಳಾದವು’ ಎಂದು ನೆನಪಿಸಿಕೊಂಡರು.

ರಾಹುಲ್ ಅವರು ಕಳೆದ ಐಪಿಎಲ್ ಋತುವಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು. ಈ ಬಾರಿ ಅವರು ಅಲ್ಲಿಂದ ಬಿಡುಗಡೆಯಾಗಿದ್ದು ಬಿಡ್‌ನಲ್ಲಿ ಲಭ್ಯರಿದ್ದಾರೆ. ಆಸ್ಟ್ರೇಲಿಯಾದಲ್ಲಿ  ಮುಂದಿನ ವಾರ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಭಾರತ ತಂಡದಲ್ಲಿಯೂ ಅವರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.