ADVERTISEMENT

ನಮ್ಮ ಕೆಮಿಸ್ಟ್ರಿಗೆ ಮುಖಭಾವವೇ ಆಧಾರ: ಸ್ಮೃತಿ ಜೊತೆಗಿನ ಒಡನಾಟ ಬಿಚ್ಚಿಟ್ಟ ಶೆಫಾಲಿ

ಪಿಟಿಐ
Published 4 ಅಕ್ಟೋಬರ್ 2024, 9:47 IST
Last Updated 4 ಅಕ್ಟೋಬರ್ 2024, 9:47 IST
<div class="paragraphs"><p> ಸ್ಮೃತಿ ಮಂದಾನ (ಎಡ) ಹಾಗೂ&nbsp;ಶೆಫಾಲಿ ವರ್ಮಾ</p></div>

ಸ್ಮೃತಿ ಮಂದಾನ (ಎಡ) ಹಾಗೂ ಶೆಫಾಲಿ ವರ್ಮಾ

   

ಪಿಟಿಐ ಚಿತ್ರ

ದುಬೈ: ಬ್ಯಾಟಿಂಗ್‌ ವೇಳೆ ಸ್ಮೃತಿ ಮಂದಾನ ಹಾಗೂ ತಾವು ಮುಖಭಾವಗಳನ್ನು ನೋಡಿಯೇ ಪರಸ್ಪರರ ನಡೆಗಳನ್ನು ಗ್ರಹಿಸುತ್ತೇವೆ ಎಂದು ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಶೆಫಾಲಿ ವರ್ಮಾ ಹೇಳಿದ್ದಾರೆ.

ADVERTISEMENT

ಶೆಫಾಲಿ ಹಾಗೂ ಮಂದಾನ, ಭಾರತ ಮಹಿಳಾ ತಂಡದ ಯಶಸ್ವಿ ಆರಂಭಿಕ ಜೋಡಿ ಎನಿಸಿದೆ. ಇತ್ತೀಚಿನ ದಿನಗಳಲ್ಲಿ ತಂಡ ಪ್ರಾಬಲ್ಯ ಮೆರೆಯಲು ಈ ಇಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ.

ಬಾಂಗ್ಲಾದೇಶದ ಆತಿಥ್ಯದಲ್ಲಿ ದುಬೈನಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಗುರುವಾರ ಆರಂಭವಾಗಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್‌ ಸವಾಲು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಶೆಫಾಲಿ ಅವರು 'ಸ್ಟಾರ್‌ ಸ್ಪೋರ್ಟ್ಸ್‌' ಜೊತೆಗೆ ಮಾತನಾಡಿದ್ದಾರೆ.

ಮೈದಾನದಲ್ಲಿ ಮಂದಾನ ಜೊತೆಗಿನ ಒಡನಾಟದ ಬಗ್ಗೆ ಹೇಳಿರುವ ಅವರು, 'ಕಳೆದ ಎರಡು ಮೂರು ವರ್ಷಗಳಿಂದ ಸ್ಮೃತಿ ಅವರೊಂದಿಗೆ ಇನಿಂಗ್ಸ್‌ ಆರಂಭಿಸುತ್ತಿದ್ದೇನೆ. ಈಗ ನಾವು ಬ್ಯಾಟಿಂಗ್ ಮಾಡುವಾಗ ಮುಖಭಾವಗಳನ್ನು ನೋಡಿಯೇ, ಪರಸ್ಪರರ ಮುಂದಿನ ನಡೆಗಳನ್ನು ಗ್ರಹಿಸಬಲ್ಲೆವು. ಇಬ್ಬರ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿತಿದ್ದೇವೆ. ಒಬ್ಬರಿಗೊಬ್ಬರು ಧನಾತ್ಮಕ ಪ್ರೇರಣೆ ನೀಡುತ್ತೇವೆ' ಎಂದಿದ್ದಾರೆ.

'ತಂಡಕ್ಕೆ, ಅದರಲ್ಲೂ ಪವರ್‌ಪ್ಲೇ ಸಂದರ್ಭದಲ್ಲಿ ನಮ್ಮಿಬ್ಬರ ಆಟ ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಹಾಗಾಗಿ, ನಮಗಾಗಿ, ತಂಡಕ್ಕಾಗಿ ಮತ್ತು ದೇಶಕ್ಕಾಗಿ ಚೆನ್ನಾಗಿ ಆಡಲು ಪ್ರಯತ್ನಿಸುತ್ತೇವೆ' ಎಂದು ಹೇಳಿದ್ದಾರೆ.

ಚೆಂಡನ್ನು ಲೀಲಾಜಾಲವಾಗಿ ಬಾರಿಸಬಲ್ಲ ಸ್ಮೃತಿ ಅವರಿಗೆ, ಇನಿಂಗ್ಸ್‌ ಹೇಗೆ ಕಟ್ಟಬೇಕೆಂಬುದು ಚೆನ್ನಾಗಿ ಗೊತ್ತಿದೆ ಎಂದಿರುವ ಶೆಫಾಲಿ, 'ಟೈಮಿಂಗ್‌ ಮತ್ತು ಇನಿಂಗ್ಸ್‌ ಬೆಳೆಸುವ ಸಾಮರ್ಥ್ಯ – ಇವರೆಡು ನಾನು ಸ್ಮೃತಿ ಅವರಲ್ಲಿ ಮೆಚ್ಚುವ ಅಂಶಗಳು' ಎಂದು ತಿಳಿಸಿದ್ದಾರೆ.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರನ್ನು ಸ್ಫೂರ್ತಿದಾಯಕ ನಾಯಕಿ ಎಂದು ಶೆಫಾಲಿ ಹೊಗಳಿದ್ದಾರೆ.

'ಹರ್ಮನ್‌ಪ್ರೀತ್‌ ಕೌರ್‌ ಅವರು ಆಟದ ಬಗ್ಗೆ ಅಪಾರ ಉತ್ಸಾಹ ಹೊಂದಿದ್ದಾರೆ. ವಿಶ್ವಕಪ್‌ ಗೆಲ್ಲುವುದು ಅವರ ಕನಸಾಗಿದೆ. ಅದನ್ನು ನಾವು ನನಸಾಗಿಸಬಹುದು ಎಂದುಕೊಂಡಿದ್ದೇನೆ. ಹರ್ಮನ್‌ ಶ್ರೇಷ್ಠ ಆಟಗಾರ್ತಿ. ಉತ್ತಮ ಸಹ ಆಟಗಾರ್ತಿ. ಎಲ್ಲರಿಗೂ ಸ್ಫೂರ್ತಿ ತುಂಬಬಲ್ಲ, ಪ್ರೇರಣೆಯಾಗಬಲ್ಲ ಅದ್ಭುತ ನಾಯಕಿ' ಎಂದು ಶ್ಲಾಘಿಸಿದ್ದಾರೆ.

2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಹರ್ಮನ್‌ಪ್ರೀತ್‌ ನೇತೃತ್ವದ ಭಾರತ ತಂಡ ರನ್ನರ್ಸ್‌ ಅಪ್‌ ಆಗಿತ್ತು. ಫೈನಲ್‌ನಲ್ಲಿ ಆಸಿಸ್‌ ಎದುರು 85 ರನ್‌ ಅಂತರದ ಸೋಲು ಅನುಭವಿಸಿತ್ತು.

ಆ ಟೂರ್ನಿ ಮೂಲಕ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದ್ದ ಶೆಫಾಲಿಗೆ ಆಗ 16 ವರ್ಷ. ಈ ಬಾರಿ ಆ ಸೋಲಿನ ನಿರಾಸೆಯಿಂದ ಈ ಬಾರಿ ಹೊರಬರುವ ನಿರೀಕ್ಷೆ ಅವರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.