ಮುಂಬೈ: ‘ನಾವು ಉತ್ತಮವಾಗಿ ಆಡಲಿಲ್ಲ, ಇದು ನಮಗೆ ಇಡೀ ಟೂರ್ನಿಯಲ್ಲಿ ಹಿನ್ನಡೆಯಾಗಲು ಕಾರಣವಾಯಿತು’ ಎಂದು ತಂಡದ ಸೋಲಿಗೆ ಕಳಪೆ ಪ್ರದರ್ಶನವೇ ಕಾರಣ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ ಪಾಂಡ್ಯ ಹೇಳಿದರು.
ಶುಕ್ರವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡ 18 ರನ್‌ಗಳ ಅಂತರದಲ್ಲಿ ಸೋತಿತ್ತು. ಆ ಮೂಲಕ ಮೂರು ವರ್ಷಗಳಲ್ಲಿ ಎರಡನೇ ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
‘ಇದು ತುಂಬಾ ನೋವಿನ ವಿಷಯ. ಒಂದು ತಂಡವಾಗಿ ನಾವು ಉತ್ತಮ ಪ್ರದರ್ಶನ ನೀಡದೇ ಇರುವುದು ಇಡೀ ಟೂರ್ನಿಯಲ್ಲಿ ನಮಗೆ ಹಿನ್ನೆಡೆಯಾಗಲು ಕಾರಣವಾಯಿತು. ಗುಣಮಟ್ಟದ ಕ್ರಿಕೆಟ್ ಆಡುವಲ್ಲಿ ನಾವು ಸೋತೆವು’ ಎಂದು ಪಂದ್ಯದ ಬಳಿಕ ನೀಡಿದ ಸಂದರ್ಶನದಲ್ಲಿ ಪಾಂಡ್ಯ ಹೇಳಿದರು.
‘ವೃತ್ತಿಪರ ಕ್ರಿಕೆಟ್‌ಗೆ ಕಾಲಿಟ್ಟ ನಂತರ ಅತ್ಯುತ್ತಮವಾದದನ್ನೇ ನಾವು ನೀಡಬೇಕು. ಆದರೆ ಒಂದು ತಂಡವಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಲಿಲ್ಲ, ಹುರುಪಿನಿಂದಲೂ ಆಟ ಆಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಏನು ತಪ್ಪಾಗಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಎಲ್ಲ ಮುಗಿದಿದೆ. ಈ ಆಟವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದಿತ್ತು’ ಎಂದು ಪ್ಲೇ ಆಫ್ ನಿಂದ ಹೊರಹೋಗಿರುವುದಕ್ಕೆ ಲಖನೌ ತಂಡದ ನಾಯಕ ಕೆ.ಎಲ್.ರಾಹುಲ್ ಬೇಸರ ವ್ಯಕ್ತಪಡಿಸಿದರು.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡವು 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.