ಮುಂಬೈ: ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ನಾವು ನಮಗೆ ಬೇಕಾದ ಪಿಚ್ ಸಿದ್ಧಪಡಿಸುವಂತೆ ಕೇಳುವುದಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಹೇಳಿದ್ದಾರೆ. ಅಲ್ಲದೆ, ಫಾರ್ಮ್ ಕಳೆದುಕೊಂಡಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕಮ್‌ಬ್ಯಾಕ್ ಮಾಡಲು ಅವರಿಗೆ ಸ್ವಲ್ಪ ಸಮಯ ಕೊಡಬೇಕು ಎಂದಿದ್ದಾರೆ.
12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲು ಕಂಡಿರುವ ಭಾರತ ತಂಡವು ಮುಂಬೈನಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ.
ಸ್ಪಿನ್ನರ್‌ಗಳಿಗೆ ಅನುಕೂಲಕರವಾದ ಪುಣೆ ಪಿಚ್‌ನಲ್ಲೂ ಭಾರತ ತಂಡ 113 ರನ್‌ಗಳಿಂದ ಸೋಲನುಭವಿಸಿತು. ಈ ನಡುವೆ 3ನೇ ಪಂದ್ಯ ನಡೆಯಲಿರುವ ಮುಂಬೈನ ವಾಂಖೆಡೆ ಪಿಚ್ ಸಹ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರಲಿದೆ ಎಂದು ಮಾತುಗಳು ಕೇಳಿಬರುತ್ತಿವೆ.
ಭಾರತ ತಂಡಕ್ಕೆ ಅನುಕೂಲವಾಗಲೆಂದು ಸ್ಪಿನ್ ಸ್ನೇಹಿ ಪಿಚ್‌ಗಳನ್ನು ಸಿದ್ಧಪಡಿಸಲಾಗುತ್ತದೆ ಎಂಬ ಮಾತುಗಳನ್ನು ಅಭಿಷೇಕ್ ಅಲ್ಲಗಳೆದಿದ್ದಾರೆ.
‘ನಮಗೆ ಬೇಕಾದಂತೆ ಪಿಚ್‌ಗಳನ್ನು ನಾವು ಸಿದ್ಧಪಡಿಸಿಕೊಳ್ಳುವುದಿಲ್ಲ. ಕ್ಯುರೇಟರ್ ಆ ಕೆಲಸ ಮಾಡುತ್ತಾರೆ. ಯಾವ ಪಿಚ್ ಇರುತ್ತದೊ ಅದಕ್ಕೆ ಅನುಗುಣವಾಗಿ ನಾವು ಆಡುತ್ತೇವೆ. ಟರ್ನಿಂಗ್ ಅಥವಾ ವೇಗಿಗಳಿಗೆ ಅನುಕೂಲಕರವಾದ ಯಾವುದೇ ಪಿಚ್ ಇದ್ದರೂ ನಾವು ಮುಂದುವರಿಯುತ್ತೇವೆ. ನಮಗೆ ಬೇಕಾದಂತೆ ಸನ್ನಿವೇಶವನ್ನು ಬದಲಿಸಿಕೊಳ್ಳಲು ಹೋಗುವುದಿಲ್ಲ’ಎಂದಿದ್ದಾರೆ.
ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಾರ್ಮ್ ಶೋಚನೀಯ ಸ್ಥಿತಿಯಲ್ಲಿದ್ದು, ಅದು ತಂಡದ ಮೇಲೆ ಪರಿಣಾಮ ಬೀರುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ನಾಯರ್, ಇದರಲ್ಲಿ ಅವರ ತಪ್ಪೇನೂ ಇಲ್ಲ. ಅವರು ಕಮ್‌ಬ್ಯಾಕ್ ಮಾಡಲು ಸ್ವಲ್ಪ ಸಮಯ ನೀಡಬೇಕಿದೆ ಎಂದಿದ್ದಾರೆ.
‘ರೋಹಿತ್ ಮತ್ತು ಕೊಹ್ಲಿ ಬಗ್ಗೆ ಅಭಿಮಾನಿಗಳಲ್ಲಿ ಪ್ರೀತಿ ಬಿಟ್ಟು ಬೇರೇನನ್ನೂ ನಾನು ಕಂಡಿಲ್ಲ. ಹಲವು ವರ್ಷಗಳಿಂದ ದೇಶದ ಪರ ಆಡುತ್ತಿರುವ ಶ್ರೇಷ್ಠ ಆಟಗಾರರಿಗೂ ಇಂತಹ ಸಮಯ ಬರುತ್ತೆ. ಆಗ ಸ್ವಲ್ಪ ಸಮಯ ನೀಡಿ, ನಂಬಿಕೆ ಇಟ್ಟುಕೊಳ್ಳಬೇಕು. ಅವರು ಖಂಡಿತಾ ಕಮ್‌ಬ್ಯಾಕ್ ಮಾಡುತ್ತಾರೆ’ಎಂದು ನಾಯರ್ ಹೇಳಿದ್ದಾರೆ.
‘ರೋಹಿತ್ ಶರ್ಮಾ ಆಗಲಿ, ವಿರಾಟ್ ಕೊಹ್ಲಿ ಆಗಲಿ ಅಥವಾ ಯುವ ಆಟಗಾರ ಶುಭಮನ್ ಗಿಲ್ ಆಗಲಿ. ಪ್ರತಿಯೊಬ್ಬರೂ ಕಠಿಣ ಶ್ರಮ ಹಾಕುತ್ತಿದ್ದಾರೆ. ತಂಡದ ಯಶಸ್ಸಿಗೆ ಎಲ್ಲರ ಪ್ರಯತ್ನ ಇದ್ದೇ ಇದೆ’ ಎಂದಿದ್ದಾರೆ.
‘ಕೆಲವೊಮ್ಮೆ ಸ್ವಲ್ಪ ತಾಳ್ಮೆಯಿಂದ ನಾವು ಕಾಯಬೇಕಾಗುತ್ತದೆ. ಅದ್ಭುತ ಆಟಗಾರರಿಗೂ ಕಠಿಣ ಸಮಯ ಬರುತ್ತೆ. ಮುಂದಿನ ದಿನಗಳಲ್ಲಿ ರೋಹಿತ್, ಕೊಹ್ಲಿ ಅಥವಾ ಇತರೆ ಆಟಗಾರರು ಪ್ರಶಂಸೆ ಪಡೆದುಕೊಳ್ಳುವ ಮಟ್ಟಕ್ಕೆ ಆಡುತ್ತಾರೆ ಎಂಬ ಖಚಿತತೆ ಖಂಡಿತಾ ನನಗೆ ಇದೆ’ಎಂದು ನಾಯರ್ ಹೇಳಿದ್ದಾರೆ.
ತಂಡದ ಅಭ್ಯಾಸ: ನವೆಂಬರ್ 1ರಿಂದ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಎದುರಿನ ಸರಣಿಯ ಮೂರನೇ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಕೈಚೆಲ್ಲಿರುವ ಭಾರತ ತಂಡವು ಕ್ಲೀನ್‌ಸ್ವೀಪ್ ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ. ಅದಕ್ಕಾಗಿ ತಂಡದ ಎಲ್ಲ ಆಟಗಾರರೂ ಬುಧವಾರ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ನಾಯಕ ರೋಹಿತ್, ವಿರಾಟ್, ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್ ಸೇರಿದಂತೆ ಎಲ್ಲ ಆಟಗಾರರು ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.