ADVERTISEMENT

ನಾಯಕರಾಗಿ ಸೂರ್ಯಕುಮಾರ್ ಆಯ್ಕೆ– ಅಗರಕರ್‌ ಸಮರ್ಥನೆ

ಪಿಟಿಐ
Published 22 ಜುಲೈ 2024, 15:53 IST
Last Updated 22 ಜುಲೈ 2024, 15:53 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

ಪಿಟಿಐ ಚಿತ್ರ

ಮುಂಬೈ: ಫಿಟ್ನೆಸ್‌, ಡ್ರೆಸ್ಸಿಂಗ್‌ ರೂಮ್‌ನಿಂದ ದೊರೆತ ಅಭಿಪ್ರಾಯ, ಸತತವಾಗಿ ಲಭ್ಯತೆ– ಈ ಮೂರು ಅಂಶಗಳು ಸೂರ್ಯಕುಮಾರ್ ಯಾದವ್‌ ಅವರಿಗೆ, ಹಾರ್ದಿಕ್‌ ಪಾಂಡ್ಯ ಅವರನ್ನು ಹಿಂದೆಹಾಕಿ  ಭಾರತ ಟಿ20 ತಂಡಕ್ಕೆ ನಾಯಕನಾಗಿ ನೇಮಕ ಮಾಡಲು ಕಾರಣವಾದವು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರಕರ್‌ ಸೋಮವಾರ ಇಲ್ಲಿ ಹೇಳಿದರು.

ಇದೇ ತಿಂಗಳ 27ರಿಂದ ನಡೆಯುವ ಶ್ರೀಲಂಕಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ನೂತನ ಮುಖ್ಯ ಕೋಚ್‌ ಗೌತಮ್ ಗಂಭೀರ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸೂರ್ಯಕುಮಾರ್ ನಾಯಕತ್ವಕ್ಕೆ ಅರ್ಹ ಅಭ್ಯರ್ಥಿಯಾಗಿದ್ದಾರೆ. ಒಂದು ವರ್ಷದಿಂದ ಅವರು ಸತತವಾಗಿ ತಂಡದಲ್ಲಿ ಆಡುತ್ತಿದ್ದಾರೆ. ಈ ವೇಳೆ ಡ್ರೆಸಿಂಗ್‌ ರೂಮ್‌ನಿಂದ ಸಾಕಷ್ಟು ಅಭಿಪ್ರಾಯಗಳು ಸಿಗುತ್ತವೆ. ಅವರಲ್ಲಿ ಆಟದ ಗ್ರಹಿಕೆ ಚೆನ್ನಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಅವರು ವಿಶ್ವದ ಅತ್ಯುತ್ತಮ ಬ್ಯಾಟರ್‌ ಬೇರೆ’ ಎಂದರು.

ಅವರ ಫಿಟ್ನೆಸ್‌ ದಾಖಲೆ ಉತ್ತಮವಾಗಿದೆ ಎಂದು ಅಗರಕರ್ ಹೇಳಿದರು. ಆ ಮೂಲಕ, ಫಿಟ್ನೆಸ್‌ ಸಮಸ್ಯೆಯಿಂದಾಗಿ ಪಾಂಡ್ಯ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಿಲ್ಲ ಎಂದು ಪರೋಕ್ಷ ಇಂಗಿತ ವ್ಯಕ್ತಪಡಿಸಿದರು.

‘ಪಾಂಡ್ಯ ಅವರಿಗೆ ಸಂಬಂಧಿಸಿ ಹೇಳುವುದಾದರೆ ಅವರು ತಂಡದ ಅತಿ ಪ್ರಮುಖ ಆಟಗಾರ. ಅದಕ್ಕಾಗಿ ಅವರು ತಂಡಕ್ಕೆ ಅಗತ್ಯ. ಅವರಂಥ ಕೌಶಲ ಮತ್ತೊಬ್ಬ ಆಟಗಾರನಲ್ಲಿ ಕಂಡುಕೊಳ್ಳುವುದು ಕಷ್ಟ’ ಎಂದರು.

‘ಕಳೆದ ಕೆಲವು ವರ್ಷಗಳಿಂದ ಅವರಿಗೆ ಫಿಟ್ನೆಸ್‌ ಕಾಪಾಡಿಕೊಳ್ಳುವುದು ಸವಾಲಾಗಿದೆ. ಆಗ ಅವರಿಗೂ ಕಷ್ಟ. ಆಯ್ಕೆಗಾರರಿಗೂ ಸಹ’ ಎಂದರು.

ಕೆ.ಎಲ್‌.ರಾಹುಲ್‌ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಅವರನ್ನು ಕಡೆಗಣಿಸಿದ ವೇಳೆ ತಾವು ಆಯ್ಕೆಗಾರರೇ ಆಗಿರಲಿಲ್ಲ ಎಂದರು.

ಜಡೇಜಾ ‘ಕೈಬಿಟ್ಟಿಲ್ಲ’

ರವೀಂದ್ರ ಜಡೇಜಾ ಅವರನ್ನು ‘ಕೈಬಿಟ್ಟಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ಆದರೆ ಇದನ್ನು ಆಯ್ಕೆ ಸಮಿತಿ ಸ್ಪಷ್ಟಪಡಿಸಬೇಕಿತ್ತು ಎಂದು ಅವರು ಒಪ್ಪಿಕೊಂಡರು. ಈ ವರ್ಷ ಬಿಡುವಿಲ್ಲದ ವೇಳಾಪಟ್ಟಿ ಇದೆ. ಅವರು ಹೆಚ್ಚಿನ ಟೆಸ್ಟ್‌ ಪಂದ್ಯಗಳಿಗೆ ಅವಕಾಶ ಪಡೆಯುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.