ADVERTISEMENT

ರೋಹಿತ್‌ರನ್ನು ನಾಯಕತ್ವದಿಂದ ಕೆಳಗಿಳಿಸಿದ್ದೇಕೆ?: ಮುಂಬೈ ಇಂಡಿಯನ್ಸ್ ಕೋಚ್ ಉತ್ತರ

ಪಿಟಿಐ
Published 6 ಫೆಬ್ರುವರಿ 2024, 10:30 IST
Last Updated 6 ಫೆಬ್ರುವರಿ 2024, 10:30 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

ಕೇಪ್ ಟೌನ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿತ್ತು. ಇದು ಅಭಿಮಾನಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ ಮುಂಬೈ ತಂಡದ ಭವಿಷ್ಯದ ಯೋಜನೆಯಿಂದ ರೋಹಿತ್ ಅವರನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಕುರಿತು ಕೊನೆಗೂ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಾರ್ಕ್ ಬೌಷರ್ ಪ್ರತಿಕ್ರಿಯೆ ನೀಡಿದ್ದು, 'ರೋಹಿತ್ ಮೇಲಿನ ಒತ್ತಡ ಕಡಿಮೆಗೊಳಿಸುವುದು ಫ್ರಾಂಚೈಸಿಯ ಇರಾದೆಯಾಗಿತ್ತು'ಎಂದು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ನಾಯಕರಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನೇಮಕಗೊಳಿಸಲಾಗಿತ್ತು.

'ಇದೊಂದು ಕಠಿಣ ನಿರ್ಧಾರವಾಗಿತ್ತು. ಓರ್ವ ಆಟಗಾರನಾಗಿ ನಾವು ಈಗಲೂ ರೋಹಿತ್ ಅವರನ್ನು ಬಯಸುತ್ತೇವೆ. ನಾಯಕತ್ವದ ಹೆಚ್ಚುವರಿ ಒತ್ತಡವಿಲ್ಲದೆ ಅವರು ಕ್ರಿಕೆಟ್ ಆನಂದಿಸಬೇಕು. ಓರ್ವ ಬ್ಯಾಟರ್ ಆಗಿ ಕಳೆದೆರಡು ಆವೃತ್ತಿ ಅವರ ಪಾಲಿಗೆ ಕೆಟ್ಟದಾಗಿತ್ತು. ಆದರೆ ನಾಯಕರಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ.

'ರೋಹಿತ್ ಭಾರತ ತಂಡದ ನಾಯಕರೂ ಆಗಿದ್ದಾರೆ. ಆದರೆ ಐಪಿಎಲ್‌ಗೆ ಬಂದಾಗ ಅವರಿಂದ ನಾಯಕತ್ವದ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಬಹುದು. ಇದರಿಂದ ರೋಹಿತ್‌ಗೆ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿದೆ' ಎಂದು ಅವರು ಹೇಳಿದರು.

'ರೋಹಿತ್ ಅದ್ಭುತ ಆಟಗಾರ. ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಹಾಗಾಗಿ ಭಾವನಾತ್ಮಕ ಅಭಿಮಾನಿಗಳ ಪಾಲಿಗೆ ಈ ನಿರ್ಧಾರವನ್ನು ಅರಗಿಸಿಕೊಳ್ಳುವುದು ಕಷ್ಟಕರವಾಗಿರಬಹುದು. ಆದರೆ ಕ್ರಿಕೆಟ್ ದೃಷ್ಟಿಕೋನದಿಂದ ಸರಿಯಾದ ನಿರ್ಧಾರವಾಗಿದೆ. ಓರ್ವ ಆಟಗಾರನಾಗಿ ರೋಹಿತ್ ಅವರಿಗೆ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿದೆ' ಎಂದು ಅವರು ಹೇಳಿದ್ದಾರೆ.

ಕಳೆದ 11 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಪ್ತಾನರಾಗಿದ್ದ ರೋಹಿತ್ ಶರ್ಮಾ, ಐದು ಸಲ ಟ್ರೋಫಿ ಗೆಲ್ಲುವ ಮೂಲಕ ಯಶಸ್ವಿ ನಾಯಕರೆನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.