ತರೋಬಾ, ಟ್ರಿನಿಡಾಡ್ ಅಂಡ್ ಟೊಬ್ಯಾಗೊ (ಪಿಟಿಐ): ವೆಸ್ಟ್ ಇಂಡೀಸ್ ‘ಎ’ ತಂಡದ ಬ್ಯಾಟ್ಸ್‌ಮನ್‌ಗಳು ಕೆಚ್ಚೆದೆಯ ಆಟವಾಡಿದ ಪರಿಣಾಮ, ಭಾರತ ‘ಎ’ ವಿರುದ್ಧ ಮೂರನೇ ಹಾಗೂ ಅಂತಿಮ ‘ಟೆಸ್ಟ್’ ಪಂದ್ಯ ಶುಕ್ರವಾರ ‘ಡ್ರಾ’ದಲ್ಲಿ ಅಂತ್ಯ ಕಂಡಿತು. ಭಾರತ ಸರಣಿಯನ್ನು 2–0 ಯಿಂದ ಗೆದ್ದುಕೊಂಡಿತು.
ಎಡಗೈ ಸ್ಪಿನ್ನರ್ ಶಾಬಾಜ್ ನದೀಮ್ ಮತ್ತೊಮ್ಮೆ 5 ವಿಕೆಟ್ ಗೊಂಚಲಿನೊಡನೆ ಗಮನಸೆಳೆದರು. ಗೆಲುವಿಗೆ 373 ರನ್‌ಗಳ ಗುರಿ ಹೊಂದಿದ್ದ ಆತಿಥೇಯರು ಮೂರನೇ ದಿನದ (ಗುರುವಾರದ) ಕೊನೆಗೆ ವಿಕೆಟ್ ನಷ್ಟವಿಲ್ಲದೇ 37 ರನ್ ಗಳಿಸಿದ್ದರು. ಅಂತಿಮ ದಿನವಾದ ಶುಕ್ರವಾರ 336 ರನ್ ಗಳಿಸಬೇಕಾಗಿತ್ತು. ಆದರೆ ಕೊನೆಯಲ್ಲಿ 6 ವಿಕೆಟ್‌ಗೆ 314 ರನ್‌ಗಳೊಡನೆ ಪಂದ್ಯ ಪೂರೈಸಿ ‘ಕ್ಲೀನ್ ಸ್ವೀಪ್’ ತಪ್ಪಿಸಿಕೊಂಡಿತು.
ಆರಂಭ ಆಟಗಾರ ಜೆರೆಮಿ ಸೊಲೊಜಾನೊ 252 ಎಸೆತಗಳ ಇನಿಂಗ್ಸ್‌ನಲ್ಲಿ ತಾಳ್ಮೆಯ 92 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಆಡಿದ ಬ್ರಂಡನ್ ಕಿಂಗ್ ಆಕ್ರಮಣಕಾರಿಯಾಗಿದ್ದು 84 ಎಸೆತಗಳಲ್ಲಿ 77 ರನ್ ಹೊಡೆದರು. ಇವರಿಬ್ಬರ ಜೊತೆಗೆ ಅನುಭವಿ ಸುನೀಲ್ ಆಂಬ್ರಿಸ್ 69 ರನ್‌ಗಳ ಕೊಡುಗೆ ನೀಡುವುದರ ಮೂಲಕ ತಮ್ಮ ತಂಡ ಕೊನೆಯ ದಿನ ಕುಸಿಯದಂತೆ ನೋಡಿಕೊಂಡರು.
ಮೊದಲ ವಿಕೆಟ್ 68 ರನ್‌ಗೆ ಕಳೆದುಕೊಂಡ ಆತಿಥೇಯ ತಂಡ, ಸೊಲೊಜಾನೊ ಮತ್ತು ಕಿಂಗ್ ಆಟದ ಮೂಲಕ ಚೇತರಿಸಿಕೊಂಡಿತು. ಇವರಿಬ್ಬರು ಕೇವಲ 17.5 ಓವರುಗಳಲ್ಲಿ 99 ರನ್ ಜೊತೆಯಾಟವಾಡಿದರು. ಕಿಂಗ್ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್, 10 ಬೌಂಡರಿಗಳಿದ್ದವು. ಸೊಲೊಜಾನೊ, ಎದುರಾಳಿ ತಂಡದ ನಾಯಕ ಹನುಮ ವಿಹಾರಿ ಅವರಿಗೆ ಬಲಿಯಾದರು.
ಜಾರ್ಖಂಡ್‌ನ ನದೀಮ್ 41 ಓವರುಗಳಲ್ಲಿ 103 ರನ್‌ಗಳಿಗೆ 5 ವಿಕೆಟ್ ಪಡೆದು ಯಶಸ್ವಿಯೆನಿಸಿದರು. ಮೂರು ‘ಟೆಸ್ಟ್’ಗಳ ಪೈಕಿ ಎರಡರಲ್ಲಿ ಆಡಿದ ನದೀಮ್ ಮೂರನೇ ಬಾರಿ ಐದು ವಿಕೆಟ್ ಪಡೆದು ಪ್ರವಾಸದಲ್ಲಿ ‘ಉತ್ತಮ ಶೋಧ’ ಎನಿಸಿದರು.
ಸಂಕ್ಷಿಪ್ತ ಸ್ಕೋರುಗಳು: ಭಾರತ ‘ಎ’: 201 ಮತ್ತು 4 ವಿಕೆಟ್‌ಗೆ 365 ಡಿಕ್ಲೇರ್ಡ್; ವೆಸ್ಟ್ ಇಂಡೀಸ್: 194 ಮತ್ತು 6 ವಿಕೆಟ್‌ಗೆ 314 (ಜೆರೆಮಿ ಸೊಲೊಜಾನೊ 92, ಬ್ರಂಡನ್ ಕಿಂಗ್ 77, ಸುನೀಲ್ ಆಂಬ್ರಿಸ್ 69; ಶಾಬಾಜ್ ನದೀಮ್ 103ಕ್ಕೆ5).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.