ಬ್ರಿಜ್‌ಟೌನ್ (ಬಾರ್ಬಾಡೋಸ್): ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದ ವೇಳೆ, ನಾಯಕ ಶಾಯಿ ಹೋಪ್ ಅವರ ವಿರುದ್ಧ ಬಹಿರಂಗವಾಗಿ ಮುನಿಸು ತೋರಿದ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಎರಡು ಪಂದ್ಯಗಳಿಗೆ ಅಮಾನತು ಮಾಡಲಾಗಿದೆ.
ಬುಧವಾರ ನಡೆದ ಪಂದ್ಯದ ವೇಳೆ ತಮ್ಮ ಬೌಲಿಂಗ್‌ನಲ್ಲಿ ಕ್ಷೇತ್ರರಕ್ಷಣೆ ಸಂಯೋಜನೆಗೆ ಸಂಬಂಧಿಸಿದಂತೆ ಹೋಪ್ ವಿರುದ್ಧ ಸಿಡಿಮಿಡಿಗೊಂಡ ಅವರು ತಮ್ಮ ಓವರ್ ಮುಗಿದ ನಂತರ ಡಗ್ಔಟ್‌ಗೆ ಹೋಗಿ ಕುಳಿತು ವಿಭಿನ್ನ ರೀತಿ ಪ್ರತಿಭಟಿಸಿದ್ದರು. ಒಂದು ಓವರ್ ನಂತರ ಮತ್ತೆ ಮರಳಿದ್ದರು.
ಪಂದ್ಯ ಮತ್ತು ಆ ಮೂಲಕ ಸರಣಿಯನ್ನು ವೆಸ್ಟ್ ಇಂಡೀಸ್ ಗೆದ್ದಿತ್ತು.
‘ಜೋಸೆಫ್ ಅವರ ವರ್ತನೆ ವೃತ್ತಿಪರತೆ ತಗ್ಗಿಸುವ ಮಟ್ಟದಲ್ಲಿತ್ತು’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
‘ಇಂಥ ವರ್ತನೆ ಸಹಿಸಲಾಗದು. ಆ ಪರಿಸ್ಥಿತಿ, ಸಂದರ್ಭ ಗಮನಿಸಿ ನಾವು ಕ್ರಮ ಕೈಗೊಂಡಿದ್ದೇವೆ’ ಎಂದು ಸಿಡಬ್ಲ್ಯುಐ ನಿರ್ದೇಶಕ ಮಿಲ್ಸ್ ಬಾಸ್ಕೋಮ್ ತಿಳಿಸಿದ್ದಾರೆ.
ಜೋಸೆಫ್ ಕೂಡ ತಮ್ಮ ನಡವಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ನಾನು ಆ ಗಳಿಗೆಯಲ್ಲಿ ಆವೇಶಕ್ಕೆ ಒಳಗಾದೆ ಎಂದು ಅವರನ್ನು ಉದ್ಧರಿಸಿ ಸಿಡಬ್ಲ್ಯುಸಿ ಹೇಳಿಕೆ ತಿಳಿಸಿದೆ.
ಏಕದಿನ ಸರಣಿಯ ನಂತರ, ಈ ಎರಡು ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಮೊದಲ ಪಂದ್ಯ ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಶನಿವಾರ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.