ADVERTISEMENT

ಟೆಸ್ಟ್‌ ಕ್ರಿಕೆಟ್‌: ಭಾರತ ‘ಎ’ ತಂಡಕ್ಕೆ ಸುಲಭ ಜಯ

ಪಿಟಿಐ
Published 28 ಜುಲೈ 2019, 20:00 IST
Last Updated 28 ಜುಲೈ 2019, 20:00 IST
ಹನುಮ ವಿಹಾರಿ– ಎಎಫ್‌ಪಿ ಚಿತ್ರ
ಹನುಮ ವಿಹಾರಿ– ಎಎಫ್‌ಪಿ ಚಿತ್ರ   

ನಾರ್ಥ್‌ ಸೌಂಡ್‌, ಆಂಟಿಗಾ: ಆಟದ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಮರ್ಥ್ಯ ತೋರಿದ ಭಾರತ ‘ಎ’ ತಂಡ ವೆಸ್ಟ್‌ ಇಂಡೀಸ್‌ ‘ಎ’ ವಿರುದ್ಧ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದಿದೆ.

ಗೆಲುವಿಗೆ ಭಾರತ ಒಟ್ಟು 97 ರನ್‌ಗಳ ಗುರಿ ಪಡೆದಿತ್ತು. ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವಾದ ಶನಿವಾರ19.3 ಓವರ್‌ಗಳನ್ನು ಆಡಿದ ಪ್ರವಾಸಿ ಪಡೆ, ಮೂರು ವಿಕೆಟ್‌ ಕಳೆದುಕೊಂಡು ಜಯಕ್ಕೆ ಅಗತ್ಯವಿದ್ದ 68 ರನ್‌ ಗಳಿಸಿತು.

ಶುಕ್ರವಾರ 29 ರನ್‌ಗಳಿಗೆ 1 ವಿಕೆಟ್‌ನಿಂದ ಎರಡನೇ ಇನಿಂಗ್ಸ್‌ ಮುಂದುವರಿಸಿದ ಭಾರತ, ಅಭಿಮನ್ಯು ಈಶ್ವರನ್‌ (27) ವಿಕೆಟ್‌ ಶೀಘ್ರ ಕಳೆದುಕೊಂಡಿತು. ಚೇಮರ್‌ ಹೋಲ್ಡರ್‌ ಅವರಿಗೆ ಈಶ್ವರ್‌ ವಿಕೆಟ್‌ ಒಪ್ಪಿಸಿದರು.

ADVERTISEMENT

ಈ ವೇಳೆ ಜೊತೆಗೂಡಿದ ನಾಯಕ ಹನುಮ ವಿಹಾರಿ (19) ಹಾಗೂ ಶ್ರೀಕರ್‌ ಭರತ್‌ (28) ತಂಡದ ಇನಿಂಗ್ಸ್‌ಗೆ ಜೀವ ತುಂಬಿದರು.

13 ಓವರ್‌ಗಳಲ್ಲಿ 49 ರನ್‌ ಸೇರಿಸಿದ ಈ ಜೋಡಿ, ಬೇರ್ಪಡುವ ಮುನ್ನ ಭಾರತವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿತು.

ತಂಡದ ಮೊತ್ತ 82 ರನ್‌ ಆಗಿದ್ದ ವೇಳೆ ಭರತ್‌ ವಿಕೆಟ್‌ ಕೈಚೆಲ್ಲಿದರು. ಎಂಟು ರನ್‌ ಸೇರುವಷ್ಟರಲ್ಲಿ ವಿಹಾರಿ ಕೂಡ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದ ವೃದ್ಧಿಮಾನ್‌ ಸಹಾ (ಔಟಾಗದೆ 9) ಮತ್ತು ಶಿವಂ ದುಬೆ (ಔಟಾಗದೆ 4) ಜಯದ ಔಪಚಾರಿಕ ಕಾರ್ಯ ಪೂರ್ಣಗೊಳಿಸಿದರು.

ವೆಸ್ಟ್‌ ಇಂಡೀಸ್‌ ‘ಎ’ ಪರ ಹೋಲ್ಡರ್‌, ಜೊಮೆಲ್‌ ವಾರಿಕನ್‌ ತಲಾ ಒಂದು ವಿಕೆಟ್‌ ಉರುಳಿಸದರು. ಎರಡು ವಿಕೆಟ್‌ಗಳು ರಕೀಂಕಾರ್ನವೆಲ್‌ ಪಾಲಾದವು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’ ಮೊದಲ ಇನಿಂಗ್ಸ್ 312 ಹಾಗೂ ಎರಡನೇ ಇನಿಂಗ್ಸ್ 30 ಓವರ್‌ಗಳಲ್ಲಿ 4 ವಿಕೆಟ್‌ಗೆ 97(ಶ್ರೀಕರ್‌ ಭರತ್‌ 28, ಅಭಿಮನ್ಯು ಈಶ್ವರನ್‌ 27; ರಕೀಂ ಕಾರ್ನವೆಲ್‌ 2ಕ್ಕೆ 18)

ವೆಸ್ಟ್‌ ಇಂಡೀಸ್‌ ‘ಎ’: 228 ಹಾಗೂ 180. ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.