ಬಾಲ್ಯದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ಆಡಿದ್ದರಿಂದ ಹಿಡಿದು ಪಟ್ನಾದಲ್ಲಿ ಭರ್ತಿ ತುಂಬಿದ್ದ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡವರೆಗೆ ಹಿರಿಯ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರ ಮನದಂಗಳದಲ್ಲಿ ಎಷ್ಟೊಂದು ಸಿರಿವಂತ ನೆನಪುಗಳು! ಭಾರತ ತಂಡದ ಹಾಲಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರೊಂದಿಗೆ ನಡೆಸಿದ ಈ ಸಂವಾದದಲ್ಲಿ ಆ ನೆನಪುಗಳು ಸುರುಳಿಯಂತೆ ಬಿಚ್ಚಿಕೊಂಡಿದ್ದು ಹೇಗೆ ಗೊತ್ತೆ?
***
‘ಬಾಲ್ಯದಲ್ಲಿ ನಾನು ಆಡಲು ಶುರು ಮಾಡಿದಾಗ ಭಾರತಕ್ಕೆ ಇನ್ನೂ ಮಹಿಳಾ ಕ್ರಿಕೆಟ್ ಬಂದಿರಲೇ ಇಲ್ಲ. ನಮ್ಮದು ಅವಿಭಕ್ತ ಕುಟುಂಬ. ಇಪ್ಪತ್ತು ಜನ ಇದ್ದೆವು. ಆಗ ವಾರಾಂತ್ಯದ ಮನರಂಜನೆ ಎಂದರೆ ಟೆನಿಸ್ ಬಾಲ್ ಕ್ರಿಕೆಟ್ ಆಟವೊಂದೇ. ನಮ್ಮ ಮನೆಯ ಕಾಂಪೌಂಡ್‌ನಲ್ಲಿ ಆಟವಾಡುತ್ತಿದ್ದೆವು. ಮುಂದೆ ಚಿತ್ರರಂಗದಲ್ಲಿ ಸಾಹಸಸಿಂಹ ಎಂದು ಹೆಸರಾದ ವಿಷ್ಣುವರ್ಧನ್ ಆಗಿನ್ನೂ ಬಾಲಕ. ನಮ್ಮೊಂದಿಗೆ ಆತನೂ ಕ್ರಿಕೆಟ್ ಆಡಲು ಬರುತ್ತಿದ್ದ...’
ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರು ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಾಗ ಎದುರಿಗಿದ್ದವರಿಗೆಲ್ಲ ಸೋಜಿಗ. ಭಾರತ ತಂಡದ ಈಗಿನ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರೊಂದಿಗೆ ‘ಪ್ರಜಾವಾಣಿ ಭಾನುವಾರದ ಪುರವಣಿ’ಗಾಗಿ ಸಂವಾದದಲ್ಲಿ ಪಾಲ್ಗೊಂಡ ಅವರು ನೆನಪುಗಳನ್ನು ಹೆಕ್ಕಿ ಹೆಕ್ಕಿ ತೆಗೆದರು.
‘ನ್ಯಾಷನಲ್ ಕಾಲೇಜಿಗೆ ಹೋದಾಗ ನೋಡಿದೆ. ಅಲ್ಲಿ ಹೆಚ್ಚಾಗಿ ಸಾಫ್ಟ್‌ಬಾಲ್ ಆಡುತ್ತಿದ್ದರು. ಮ್ಯಾಟ್ ಇಲ್ಲ, ನೆಟ್ ಇಲ್ಲದ ಅಂಗಣದಲ್ಲಿ ನಾವೇ ಹುಡುಗಿಯರು ಸೇರಿಕೊಂಡು ಕ್ರಿಕೆಟ್ ಆಡಲು ಶುರು ಮಾಡಿದೆವು. 1971ರಲ್ಲಿ ಫಾಲ್ಕನ್ ಕ್ಲಬ್ ಆರಂಭವಾಯಿತು. ಎರಡು ವರ್ಷದ ನಂತರ ಭಾರತ ಮಹಿಳಾ ಕ್ರಿಕೆಟ್ ಅಸೋಸಿಯೇಷನ್ ಆರಂಭವಾಯಿತು. ನಾಯಕಿಯಾಗಿ ಕರ್ನಾಟಕ ತಂಡವನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆ’ ಎಂದು ಆರಂಭಿಕ ದಿನಗಳ ಮೆಲುಕು ಹಾಕಿದರು.
‘ನಮ್ಮ ತಂದೆ, ತಾಯಿಗೆ ನಾವು ಏಳು ಜನ ಮಕ್ಕಳು. ಅವರಲ್ಲಿ ನಾಲ್ವರು ಎಂಜಿನಿಯರ್, ಒಬ್ಬರು ಪಿಎಚ್.ಡಿ ಮತ್ತು ಇನ್ನೊಬ್ಬರು ಡಬಲ್ ಗ್ರ್ಯಾಜುಯೇಟ್.ನಾನು ಮಾತ್ರ ಹೆಬ್ಬೆಟ್ಟು! ಅಂದರೆ, ಕ್ರಿಕೆಟ್‌ನತ್ತ ಹೆಚ್ಚು ಆಸಕ್ತಳು. ಆದರೆ ನನ್ನ ತಾಯಿಗೆ ಇದ್ದ ದೂರದೃಷ್ಟಿಯು ಅಗಾಧವಾದದ್ದು. ಯಾರಿಗೆ ಏನು ಆಸಕ್ತಿ ಇದೆಯೋ ಅದರಲ್ಲಿಯೇ ಬೆಳೆಯಬೇಕು ಎಂಬ ಅವರ ದಿಟ್ಟ ನಿಲುವು ನನ್ನ ಆಟಕ್ಕೆ ಪ್ರೋತ್ಸಾಹದ ನೀರೆರೆಯಿತು. ಆದರೆ, ನಾನು ಪದವಿ ಗಳಿಸಲೇಬೇಕು ಎಂಬ ನಿಬಂಧನೆ ಹಾಕಿದ್ದರು. ಅಮ್ಮನ ಪ್ರೋತ್ಸಾಹದಿಂದಕ್ರಿಕೆಟ್‌ನಲ್ಲಿ ಬೆಳೆದೆ. ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗವೂ ಲಭಿಸಿತು. ಕಾರ್ಯದಕ್ಷತೆಯಿಂದಾಗಿ ಬಡ್ತಿಗೊಂಡು ಮುಖ್ಯಪ್ರಬಂಧಕಿಯಾಗಿ ನಿವೃತ್ತಿಯಾದೆ. ಅಮ್ಮ ನಾನು ಆಡಿದ ಒಂದು ಪಂದ್ಯ ನೋಡಿರಬೇಕಷ್ಟೇ’ ಎಂದು ತಾಯಿಯ ಪ್ರೋತ್ಸಾಹವನ್ನು ನೆನೆದರು.
‘ಅವತ್ತು ನಾವು ಕ್ರಿಕೆಟ್ ಆರಂಭಿಸಿದ ಹೊತ್ತಲ್ಲಿ ಮಹಿಳೆಯರ ಕೆಲವು ಬೇರೆ ಕ್ರೀಡೆಗಳೂ ಆರಂಭವಾಗಿದ್ದವು. ಅದರಲ್ಲಿ ಬಹಳಷ್ಟು ಬೆಳೆಯಲೇ ಇಲ್ಲ. ಆದರೆ ಕ್ರಿಕೆಟ್‌ಗೆ ಆ ಗತಿ ಬರಲಿಲ್ಲ. ನಮ್ಮ ತಂಡ ಚೆನ್ನಾಗಿ ಆಡೋಕೆ ಶುರು ಮಾಡಿದಾಗಗೌರವ ಹೆಚ್ಚಿತು. ಇಲ್ಲಿಗೆ ನ್ಯೂಜಿಲೆಂಡ್ ತಂಡ ಬಂದಾಗ, ಅವರಿಗೆ ಸರಿಸಮನಾಗಿ ಆಡಿದ ರೀತಿ ಎಲ್ಲರನ್ನೂ ಸೆಳೆಯಿತು. ಸಮಾಜವು ಮಹಿಳಾ ಕ್ರಿಕೆಟ್ ಅನ್ನು ಸ್ವೀಕರಿಸಲು ಆರಂಭಿಸಿತು. ಅದು ಗಟ್ಟಿ ಅಡಿಪಾಯವಾಯಿತು. ಅಂದು ನಾನು ಗಳಿಸಿದ್ದ ರನ್, ಶತಕ ಮತ್ತು ಗೆಲುವುಗಳಿಗಿಂತ ಅಡಿಪಾಯ ಹಾಕಿದ್ದೇ ಸಾರ್ಥಕತೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ಟ್ವೆಂಟಿ–20 ಕ್ರಿಕೆಟ್ ಆಡಲಿಲ್ಲವಲ್ಲ ಎಂಬ ಕೊರಗು ನನಗಿದೆ. ಆಗ ನನ್ನ ಶೈಲಿಯು ಟಿ20 ಮಾದರಿಗೆ ಹೇಳಿ ಮಾಡಿಸಿದಂತಿತ್ತು. ಚುಟುಕು ಮಾದರಿಯು ಮನರಂಜನೆಯ ಕಣಜ. ಆದರೆ ಇವತ್ತು ಮಹಿಳೆಯರಿಗೆ ಟೆಸ್ಟ್ ಕ್ರಿಕೆಟ್ ಇಲ್ಲ.ಆಟಗಾರ್ತಿಯರಿಗೆ ನಿಜವಾದ ಕ್ರಿಕೆಟ್ ಎಂದರೇ ಟೆಸ್ಟ್. ಅದರಲ್ಲಿ ಅವರು ತಮ್ಮ ಸಂಪೂರ್ಣ ಕೌಶಲ, ದೈಹಿಕ, ಮಾನಸಿಕ ಕ್ಷಮತೆಯನ್ನು ಪಣಕ್ಕೊಡ್ಡಲು ಸಾಧ್ಯ. ನಾನು ಆಯ್ಕೆ ಸಮಿತಿ ಮುಖ್ಯಸ್ಥೆಯಾಗಿದ್ದಾಗ, ಎರಡು ದಿನಗಳ ಪಂದ್ಯದ ಮಾದರಿಯನ್ನು ಆರಂಭಿಸಲು ಒತ್ತಾಯಿಸಿದ್ದೆ. ಕೆಲವು ದೇಶಗಳು ಒಪ್ಪಿದವು. ಇನ್ನು ಕೆಲವರು ಒಪ್ಪಲಿಲ್ಲ. ಹಾಗಾಗಿ ಸೀಮಿತ ಓವರ್ ಕ್ರಿಕೆಟ್ ಮಾತ್ರ ನಡೆಯುತ್ತಿದೆ. ಆ್ಯಷಸ್ ಸರಣಿಯಲ್ಲಿ ಮಹಿಳೆಯರಿಗಾಗಿ (ಆಸ್ಟ್ರೇಲಿಯಾ–ಇಂಗ್ಲೆಂಡ್) ಒಂದು ಟೆಸ್ಟ್ ಮಾತ್ರ ನಡೆಯುತ್ತಿದೆ’ ಎಂದು ಶಾಂತಾ ಹೇಳಿದರು.
‘ಬಹಳಷ್ಟು ಜನ ನನ್ನ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾರೆ. ಆದರೆ,ವೆಸ್ಟ್ ಇಂಡೀಸ್ ತಂಡದ ಕ್ಯಾಪ್ಟನ್ ಲೂಯಿಸ್ ಬ್ರೈನ್ ಅವರು ತಮ್ಮ ಸಂದರ್ಶನವೊಂದರಲ್ಲಿ ಶಾಂತಾ ಬ್ಯಾಟ್ಸ್‌ವುಮನ್‌ಗಿಂತ ಬೌಲರ್ ಆಗಿಯೇ ಉತ್ತಮವಾಗಿ ಆಡುತ್ತಾರೆ ಎಂದಿದ್ದರು. ಮಧ್ಯಮವೇಗಿಯಾಗಿದ್ದ ನನ್ನ ಬೌಲಿಂಗ್‌ಗೆ ಸಾಣೆ ಹಿಡಿದವರು ಕೋಲ್ಕತ್ತದ ಕೋಚ್ ಪ್ರದ್ಯುತ್ ಮಿತ್ರಾ ಅವರು. ಸ್ವಿಂಗ್ ಮಾಡಲು ಅವರು ನನಗೆ ಕಲಿಸಿದರು. ಸಹಜವಾದ ಇನ್‌ಸ್ವಿಂಗರ್ ಪ್ರಯೋಗಿಸುತ್ತಿದ್ದೆ. 1976ರಲ್ಲಿ ಒಂದು ಬಾರಿ ಲಾಲಾ ಅಮರನಾಥ್, ಕ್ರಾಸ್ ಸೀಮ್ (ಚೆಂಡಿನ ಮಧ್ಯಭಾಗದಲ್ಲಿರುವ ಹೊಲಿಗೆಗಳು) ಹಿಡಿದು ಬೌಲ್ ಮಾಡಲು ಸಲಹೆ ನೀಡಿದರು. ಅದನ್ನು ರೂಢಿಸಿಕೊಂಡೆ. ಔಟ್‌ಸ್ವಿಂಗರ್ ಬಂತು. 1982ರ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕಿ ಸೂ ಬೋಟ್‌ಮನ್ ನನ್ನ ಎಸೆತದಲ್ಲಿ ಔಟಾಗಿ ಅಚ್ಚರಿಗೊಂಡಿದ್ದರು. ಆದರೆ, ನನ್ನ ಸ್ವಿಂಗ್‌ಗಳು ಕ್ವಿಕ್ ಆಗಿರದ ಕಾರಣ ಹೆಚ್ಚು ವಿಕೆಟ್ ಗಳಿಸಲಿಲ್ಲ’ ಎಂದು ಬೌಲಿಂಗ್ ಕೌಶಲ ರೂಢಿಸಿಕೊಂಡ ಬಗೆಯನ್ನು ವಿವರಿಸಿದರು.
‘1975ರಲ್ಲಿ ಪುಣೆಯಲ್ಲಿ ನ್ಯೂಜಿಲೆಂಡ್ ಎದುರಿನ ‘ಟೆಸ್ಟ್’ನಲ್ಲಿ ಶತಕ ಗಳಿಸಿದೆ. ಆಗ ಡ್ರೆಸ್ಸಿಂಗ್ ರೂಮ್‌ನಿಂದ ಇಬ್ಬರು ಓಡೋಡುತ್ತ ಕ್ರೀಸ್‌ಗೆ ಬಂದು ನನ್ನನ್ನು ಅಭಿನಂದಿಸಿದರು. ಅವರಲ್ಲಿ ಒಬ್ಬರು ಡಯಾನಾ ಎಡುಲ್ಜಿಯ (ಭಾರತ ತಂಡದ ಆಟಗಾರ್ತಿ) ತಂದೆ ಮತ್ತು ಇನ್ನೊಬ್ಬರು 16 ವರ್ಷದ ಬಾಲಕಿ ನೀಲಿಮಾ ಜೋಗಳೆಕರ್. ಅವರು ತಂಡದ ಕಾಯ್ದಿಟ್ಟ ಆಟಗಾರ್ತಿಯಾಗಿದ್ದರು. ಅದರ ನಂತರ ನಮ್ಮ ತಂಡ ನ್ಯೂಜಿಲೆಂಡ್ ಪ್ರವಾಸಕ್ಕೆ ಹೋದಾಗ ಅಲ್ಲಿಯ ಟೆಸ್ಟ್‌ನಲ್ಲಿ ಶತಕ ಹೊಡೆದೆ. ಆಗಲೂ ತಂಡದಲ್ಲಿದ್ದ ನೀಲಿಮಾ ಓಡೋಡಿ ಬಂದು ನನಗೆ ಹೂವಿನ ಹಾರ ಹಾಕಿದ್ದರು. ಎರಡೂ ಬಾರಿ ನೀಲಿಮಾ ಇದ್ದದ್ದು ಇವತ್ತಿಗೂ ಅವಿಸ್ಮರಣೀಯ. ಆಗ ಪುರುಷರ ಕ್ರಿಕೆಟ್‌ನಲ್ಲಿಯೂ ಚೆನ್ನಾಗಿ ಆಡಿದವರಿಗೆ ಪ್ರೇಕ್ಷಕರಲ್ಲಿ ಕೆಲವರು ಹೋಗಿ ಹೂಮಾಲೆ ಹಾಕಿ ಬರುತ್ತಿದ್ದರು. ಈಗಿನಷ್ಟು ಭದ್ರತೆಯೆಲ್ಲ ಏನೂ ಇರುತ್ತಿರಲಿಲ್ಲ’ ಎಂದು ಹೇಳಿದರು.
‘1976ರಲ್ಲಿ ಪಟ್ನಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮಹಿಳಾ ಟೆಸ್ಟ್ ಪಂದ್ಯ ನಡೆದಿತ್ತು. ಕ್ರೀಡಾಂಗಣದ ಪ್ರವೇಶಕ್ಕೆ ಟಿಕೆಟ್ ನಿಗದಿಪಡಿಸಲಾಗಿತ್ತು. ಜನರು ಟಿಕೆಟ್ ಖರೀದಿಸಿ ಪಂದ್ಯ ನೋಡಲು ಬಂದಿದ್ದರು. ಇಡೀ ಕ್ರೀಡಾಂಗಣ ತುಂಬಿತ್ತು’ ಎನ್ನುವುದು ಅವರ ಬದುಕಿನ ಶ್ರೀಮಂತ ನೆನಪು.
‘ಜೀವನದಲ್ಲಿ ನಿಜವಾದ ಸಾಧನೆಯೆಂದರೆ ಬೇರೆಯವರನ್ನು ಬೆಳೆಸುವುದು. ‘ಆಲ್ ಮೈ ಚಿಲ್ಡ್ರನ್’ ಎಂಬ ಪುಸ್ತಕ ಇದೆ. ಕನ್ನಡದಲ್ಲಿ ‘ಎಲ್ಲ ನನ್ನ ಮಕ್ಕಳು’ ಎನ್ನುವ ನಾಟಕ ಇದೆ. ಅದೇ ರೀತಿ, ಆಡುವವರೆಲ್ಲ ನನ್ನ ಮಕ್ಕಳೇ. ನನಗೆ ಸಿಗದೇ ಇರುವುದು ಬೇರೆಯವರಿಗೆ ಸಿಗಬೇಕು. ಈಗ 19–20 ವರ್ಷ ವಯಸ್ಸಿನ ಆಟಗಾರ್ತಿಯೊಬ್ಬರು ಜಾಹೀರಾತು ಒಪ್ಪಂದಗಳಿಂದಲೇ ಮೂರೂವರೆ ಕೋಟಿ ರೂಪಾಯಿ ಗಳಿಸುವಂತಾಗಿರುವುದನ್ನು ಕೇಳಿದಾಗ ಖುಷಿಯಾಗುತ್ತದೆ. ಮಕ್ಕಳು ಬೆಳೆಯಬೇಕು ಅದೇ ಸಾರ್ಥಕತೆ’ ಎಂದು ಶಾಂತಾ ಭಾವುಕರಾದರು.
ವೇದಾಗೆ ಕಪ್ ಗೆಲ್ಲುವ ಟಾಸ್ಕ್!
ಐದು ದಶಕಗಳಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಹತ್ತಾರು ಪ್ರಥಮಗಳನ್ನು ಸಾಧಿಸಿರುವ ಶಾಂತಾ ರಂಗಸ್ವಾಮಿ ಅವರು ಸಾಧಿಸದೇ ಬಿಟ್ಟಿರುವ ಒಂದು ವಿಷಯವಿದೆ. ಈಗ ಅದನ್ನು ಈಡೇರಿಸುವ ಹೊಣೆಯನ್ನು ಅವರು ವೇದಾ ಕೃಷ್ಣಮೂರ್ತಿಗೆ ವರ್ಗಾಯಿಸಿದ್ದಾರೆ.
‘ಪ್ರಜಾವಾಣಿ’ ಸಂದರ್ಶನದ ಹೊತ್ತಿನಲ್ಲಿ ವೇದಾ, ‘ನಮಗೆ ಅಂದರೆ ಈ ಕಾಲದ ಆಟಗಾರ್ತಿಯರಿಗೆ ನೀವು ಏನು ಹೇಳಲು ಇಷ್ಟಪಡುತ್ತೀರಿ’ ಎಂಬ ಪ್ರಶ್ನೆ ಇಟ್ಟರು.
ಅದಕ್ಕೆ ಪ್ರತಿಕ್ರಿಯಿಸಿದ ಶಾಂತಾ, ‘ನಾನು ಆಡುವಾಗ ಕರ್ನಾಟಕ ತಂಡವು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತು ಬಾರಿ ಫೈನಲ್‌ಗೆ ಬಂದಿತ್ತು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅದೊಂದು ಗೆದ್ದು ನನ್ನ ಆಸೆ ತೀರಿಸಿಬಿಡು’ ಎಂದು ಹೇಳಿದರು.
‘ನೀವು ಈಗ ಆಯೋಜಿಸಿರುವ ಈ ಟೂರ್ನಿಯಿಂದ ಲಭಿಸಿರುವ ಆತ್ಮವಿಶ್ವಾಸ, ಅಭ್ಯಾಸಗಳ ಬಲದಿಂದ ನಾವು ಆ ಕಪ್ ಜಯಿಸುತ್ತೇವೆ ಎಂಬ ನಂಬಿಕೆ ನನಗಿದೆ. ಕಪ್ ಗೆದ್ದ ತಕ್ಷಣ ಅದನ್ನು ತಗೊಂಡು ಮೊದಲು ನಿಮ್ಮ ಮನೆಗೆ ಬರ್ತೀವಿ’ ಎಂದು ವೇದಾ ಭರವಸೆ ನೀಡಿದರು.
‘ಶಾಂತಾ ಹಲವಾರು ಪ್ರತಿಭಾನ್ವಿತ ಮಕ್ಕಳಿಗೆ ಆರ್ಥಿಕವಾಗಿ, ತರಬೇತಿಗಾಗಿ ನೀಡುವ ಪ್ರೋತ್ಸಾಹ ದೊಡ್ಡದು. ಹೆಣ್ಣುಮಕ್ಕಳಿಗೆ ಬೆಂಬಲವಾಗಿ ಸದಾಕಾಲ ನಿಲ್ಲುವ ಅವರಿಂದಾಗಿ ಮಹಿಳಾ ಕ್ರಿಕೆಟ್ ಇಷ್ಟು ಬೆಳೆಯಲು ಕಾರಣವಾಗಿದೆ’ ಎಂದು ವೇದಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.