ADVERTISEMENT

ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆಯತ್ತ ಚಿತ್ತ

ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ –ಭಾರತ ಎರಡನೇ ಟೆಸ್ಟ್‌: ವೇಗಿ ಆವೇಶ್ ಖಾನ್‌ಗೆ ಬುಲಾವ್

ರೋಶನ್‌ ತ್ಯಾಗರಾಜನ್‌
Published 29 ಡಿಸೆಂಬರ್ 2023, 19:50 IST
Last Updated 29 ಡಿಸೆಂಬರ್ 2023, 19:50 IST
ಆವೇಶ್ ಖಾನ್
ಆವೇಶ್ ಖಾನ್   

ಸೆಂಚುರಿಯನ್: ಕೇಪ್‌ಟೌನ್‌ನಲ್ಲಿ ಜನವರಿ 3ರಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಏನು ಮಾಡಲಿದೆ? ಗುರುವಾರ ಸಂಜೆ ಮುಗಿದ ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್‌ ಮತ್ತು 32 ರನ್‌ಗಳಿಂದ ತಂಡವು ಸೋತ ನಂತರ ಪತ್ರಿಕಾಗೋಷ್ಠಿಗೆ ಬಂದಿದ್ದ ನಾಯಕ ರೋಹಿತ್ ಶರ್ಮಾ, ‘ಈ ಸೋಲಿನ ಕಹಿಯನ್ನು ಮರೆತು ಮುಂದಿನ ಸಿದ್ಧತೆ ನೋಡಿಕೊಳ್ಳುವತ್ತ ಗಮನ ಹರಿಸುತ್ತೇವೆ’ ಎಂದಿದ್ದರು.

ಆದರೆ ಅವರು ಹೇಳಿದಷ್ಟು ಸುಲಭವಾಗಿ ಸೋಲು ಮರೆಯುವುದು ಸಾಧ್ಯವಿಲ್ಲ. ವಾಸ್ತವದಲ್ಲಿ ಈಗ ಅವರ ಮುಂದಿರುವ ಏಕೈಕ ದಾರಿಯೆಂದರೆ ತಂಡದ ಸಂಯೋಜನೆಯನ್ನು ಮರುರಚನೆ ಮಾಡಿ ಮುಂದಿನ ಹೋರಾಟಕ್ಕೆ ಅಣಿಯಾಗುವುದೊಂದೇ. 

ಗಾಯಗೊಂಡಿರುವ ಮೊಹಮ್ಮದ್ ಶಮಿ ಅವರ ಗೈರುಹಾಜರಿ ತಂಡವನ್ನು ಕಾಡುತ್ತಿದೆ. ಇದೀಗ ಅವರ ಸ್ಥಾನಕ್ಕೆ ಬಲಗೈ ವೇಗಿ ಆವೇಶ್ ಖಾನ್ ಅವರನ್ನು ಕರೆಸಿಕೊಳ್ಳಲಾಗುತ್ತಿದೆ.  ಇಂದೋರ್‌ನ 27 ವರ್ಷದ ಖಾನ್ ಅವರಿಗೆ ಎಂಟು ಏಕದಿನ ಮತ್ತು 19 ಟ್ವೆಂಟಿ–20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಅನುಭವ ಇದೆ.  

ADVERTISEMENT

ಸದ್ಯ ಬೆನೋನಿಯಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ಎದುರು ಆಡುತ್ತಿರುವ ಭಾರತ ಎ ತಂಡದಲ್ಲಿ ಖಾನ್ ಇದ್ದಾರೆ. ಅವರನ್ನು ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ಆದರೆ ಅವರಿಗಾಗಿ ಸ್ಥಾನ ಬಿಟ್ಟು ಕೊಡುವವರು ಯಾರು?  ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಂತೂ ಸ್ಥಾನ ಬಿಡುವುದಿಲ್ಲ ಎಂಬುದು ನಿಸ್ಸಂಶಯ. ಆದರೆ, ಶಾರ್ದೂಲ್ ಠಾಕೂರ್ ಅಥವಾ ಪ್ರಸಿದ್ಧ ಕೃಷ್ಣ ಅವರಲ್ಲಿ ಒಬ್ಬರು ಆವೇಶ್‌ ಅವರಿಗೆ ಸ್ಥಾನ ಬಿಟ್ಟುಕೊಡ ಬೇಕಾಗಬಹುದು. ಮೊದಲ ಟೆಸ್ಟ್‌ನಲ್ಲಿ ಶಾರ್ದೂಲ್  19 ಓವರ್‌ ಬೌಲಿಂಗ್ ಮಾಡಿ 101 ರನ್‌ ಬಿಟ್ಟುಕೊಟ್ಟಿದ್ದಾರೆ. ಪದಾರ್ಪಣೆ ಮಾಡಿದ್ದ ಕನ್ನಡಿಗ ಪ್ರಸಿದ್ಧ  20 ಓವರ್‌ಗಳನ್ನು ಬೌಲಿಂಗ್ ಮಾಡಿ 93 ರನ್ ಕೊಟ್ಟಿದ್ದರು. ಒಂದು ವಿಕೆಟ್ ಗಳಿಸಿದ್ದರು. ಆದರೆ ಒಟ್ಟಾರೆ ಬೌಲಿಂಗ್ ಅಷ್ಟೇನೂ ಪರಿಣಾಮಕಾರಿ ಆಗಿರಲಿಲ್ಲ.

ರವೀಂದ್ರ ಜಡೇಜ ಫಿಟ್ ಆಗಿ ಆಯ್ಕೆಗೆ ಲಭ್ಯರಾದರೆ, ಆರ್. ಅಶ್ವಿನ್‌ ವಿಶ್ರಾಂತಿ ಪಡೆಯಬೇಕಾಗ ಬಹುದು. ಬೆನ್ನುನೋವಿನಿಂದಾಗಿ ಜಡೇಜ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ.

ಅಶ್ವಿನ್ 19 ಓವರ್‌ಗಳಲ್ಲಿ 41 ರನ್ ಕೊಟ್ಟು ಒಂದು ವಿಕೆಟ್ ಗಳಿಸಿದ್ದು. ಆದರೆ ಅವರೂ ಬ್ಯಾಟರ್‌ಗಳನ್ನು ವಿಚಲಿತ ಗೊಳಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಅಷ್ಟಕ್ಕೂ ಪಿಚ್‌ನಲ್ಲಿ ಚೆಂಡು ಹೆಚ್ಚು ತಿರುವು ಪಡೆಯುತ್ತಿರಲಿಲ್ಲ ಹಾಗೂ ಸ್ಪಿನ್ನರ್‌ಗಳಿಗೆ ನೆರವು ಇರಲಿಲ್ಲ. ಎರಡೂ ಇನಿಂಗ್ಸ್‌ನಲ್ಲಿ ಅಶ್ವಿನ್ ಬ್ಯಾಟಿಂಗ್‌ ನಲ್ಲಿಯೂ ವಿಫಲರಾದರು. ಅದರಿಂದಾಗಿ ಜಡೇಜ ಅವರ ಆಲ್‌ರೌಂಡ್ ಸಾಮರ್ಥ್ಯವನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚು.

ಎರಡನೇ ಪಂದ್ಯ ಆರಂಭವಾಗಲು ಇನ್ನೂ ನಾಲ್ಕು ದಿನಗಳಿವೆ. ಸೋಲಿನ ಆಘಾತದಿಂದ ಚೇತರಿಸಿಕೊಂಡು ಮತ್ತು ಲಯಕ್ಕೆ ಮರಳಲು ಸಾಕಷ್ಟು ಸಮಯ ಇದೆ.

ಬೌಲಿಂಗ್‌ನಲ್ಲಿ ಎರಡು ಪ್ರಮುಖ ಬದಲಾವಣೆಗಳು ಒಂದಿಷ್ಟು ಬಲ ತುಂಬಬಹುದು. ಆದರೆ ರೋಹಿತ್ ಬಳಗವು ಬ್ಯಾಟಿಂಗ್ ವಿಭಾಗದತ್ತಲೂ ಗಮನ ಹರಿಸುವ ಅಗತ್ಯವಿದೆ. ಇದೀಗ ಸರಣಿ ಗೆಲುವಿನ ಅವಕಾಶವಂತೂ ಕೈಜಾರಿದೆ.

ಆದರೆ ಸಮಬಲ ಸಾಧಿಸುವ ದಾರಿ ಇನ್ನೂ ಇದೆ. ಅದಕ್ಕಾಗಿ ಭಾರತ ತಂಡ ಹೊಸ ಕಸುವು ತುಂಬಿಕೊಂಡು ಹುಮ್ಮಸ್ಸಿನಿಂದ ಆಡಬೇಕಿದೆ.  

ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಶ್ರೇಯಾಂಕದ ತಂಡ ಎಂಬುದನ್ನು ನೆನಪಿಟ್ಟುಕೊಂಡು ಅದಕ್ಕೆ ತಕ್ಕಂತೆ ಆಡಬೇಕಿದೆ.  

ಜಡೇಜ ತಾಲೀಮು

ಮೊದಲ ಟೆಸ್ಟ್‌ ಪಂದ್ಯದ ಸೋಲಿನ ನಡುವೆಯೇ ಭಾರತಕ್ಕೆ ಸಮಾಧಾನದ ಸುದ್ದಿಯೊಂದು ಇದೆ. ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಜ. 3ರಿಂದ ನಡೆಯುವ ಎರಡನೇ ಟೆಸ್ಟ್‌ಗೆ ಲಭ್ಯರಾಗುವ ಸಾಧ್ಯತೆಯಿದೆ.

ಬೆನ್ನು ನೋವಿನಿಂದಾಗಿ ಕೊನೆಯ ಗಳಿಗೆಯಲ್ಲಿ ಜಡೇಜಾ ಮೊದಲ ಟೆಸ್ಟ್‌ ತಂಡದಿಂದ ಹೊರಬಿದ್ದಿದ್ದರು. ಆದರೆ ಪಂದ್ಯದ ಮೂರನೆ ದಿನ ತಂಡದ ಜೊತೆ ವಾರ್ಮ್‌ಅಪ್‌ನಲ್ಲಿ ಜಡೇಜ ಕಾಣಿಸಿಕೊಂಡಿದ್ದಾರೆ.

ಅಂತಿಮ ಟೆಸ್ಟ್‌: ಎಲ್ಗರ್‌ ನಾಯಕ

ಕೊನೆಯ ಟೆಸ್ಟ್‌ ಸರಣಿ ಆಡುತ್ತಿರುವ ಡೀನ್ ಎಲ್ಗರ್ ಅವರು ಗಾಯಗೊಂಡಿರುವ ತೆಂಬಾ ಬವುಮಾ ಸ್ಥಾನದಲ್ಲಿ ಭಾರತ ವಿರುದ್ಧ ಎರಡನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ನಾಯಕತ್ವ ವಹಿಸಲಿದ್ದಾರೆ. ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನ ಫೀಲ್ಡಿಂಗ್‌ ವೇಳೆ ಬವುಮಾ ಕಾಲಿನ ಸ್ನಾಯುರಜ್ಜು ಸೆಳೆತಕ್ಕೆ ಒಳಗಾಗಿರುವುದು ಸ್ಕ್ಯಾನಿಂಗ್‌ ವೇಳೆ ಪತ್ತೆಯಾಗಿತ್ತು.‌ ಬವುಮಾ ಸ್ಥಾನದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ ಜುಬೇರ್‌ ಹಮ್ಝಾ ತಂಡ ಸೇರಿಕೊಳ್ಳುವರು. ಈ ಹಿಂದೆ ಭಾರತ 2021–22ರಲ್ಲಿ ಪ್ರವಾಸ ಕೈಗೊಂಡಿದ್ದಾಗ ಎಲ್ಗರ್‌ ನಾಯಕರಾಗಿದ್ದರು.

ಭಾರತಕ್ಕೆ ದಂಡ

ದುಬೈ : ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರಿ ಸೋಲನುಭವಿಸಿದ ಭಾರತ ತಂಡಕ್ಕೆ ಗಾಯದ ಮೇಲೆ ಬರೆ ಎನ್ನುವಂತೆ ನಿಧಾನಗತಿಯಲ್ಲಿ ಓವರು ಮಾಡಿದ್ದಕ್ಕೆ ಪಂದ್ಯ ಶುಲ್ಕದ ಶೇ 10ರಷ್ಟನ್ನು ದಂಡವಾಗಿ ವಿಧಿಸಲಾಗಿದೆ. ಜೊತೆಗೆ ರೋಹಿತ್‌ ಶರ್ಮಾ ಬಳಗ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಎರಡು ಅಮೂಲ್ಯ ಪಾಯಿಂಟ್‌ಗಳನ್ನು ಕಳೆದುಕೊಂಡಿತು.

ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದ ಮೂರನೇ ದಿನವಾದ ಗುರುವಾರವೇ ಭಾರತ ಇನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲನುಭವಿಸಿತು. ಭಾರತ ನಿಗದಿ ಅವಧಿಯಲ್ಲಿ ಎರಡು ಓವರ್‌ ಕಡಿಮೆ ಮಾಡಿದೆ ಎಂದು ಪಂದ್ಯದ ರೆಫ್ರಿ ಕ್ರಿಸ್‌ ಬ್ರಾಡ್‌ ಈ ಕ್ರಮ ಕೈಗೊಂಡಿದ್ದಾರೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

‘ರೋಹಿತ್‌ ಶರ್ಮಾ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಸ್ತಾವಿತ ಕ್ರಮಕ್ಕೆ ಸಮ್ಮತಿಸಿದ್ದಾರೆ. ಹೀಗಾಗಿ ವಿಚಾರಣೆ ಅಗತ್ಯವಿಲ್ಲ’ ಎಂದು ಐಸಿಸಿ ತಿಳಿಸಿದೆ.

ಪಾಯಿಂಟ್‌ ಕಡಿತಕ್ಕೆ ಮೊದಲು ಭಾರತ ಡಬ್ಲ್ಯುಟಿಸಿ ಪಾಯಿಂಟ್‌ ಪಟ್ಟಿಯಲ್ಲಿ 16 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿತ್ತು. ಈಗ ಆರನೇ ಸ್ಥಾನಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.