ಲಾಡೆರ್‌ಹಿಲ್ (ಅಮೆರಿಕ): ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆಲ್ಲಬೇಕೆಂಬ ಭಾರತ ತಂಡದ ಕನಸಿಗೆ ಬ್ರೆಂಡನ್ ಕಿಂಗ್ ಅಡ್ಡಿಯಾದರು.
ಭಾನುವಾರ ನಡೆದ ಕೊನೆಯ ಟಿ20 ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡ ವಿಂಡೀಸ್ ತಂಡ ಐದು ಪಂದ್ಯಗಳ ಸರಣಿಯನ್ನು 3–2 ರಿಂದ ತನ್ನದಾಗಿಸಿಕೊಂಡಿತು.
ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಬಳಗ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 165 ರನ್ ಗಳಿಸಿತು. ವಿಂಡೀಸ್ ತಂಡ 18 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 171 ರನ್ ಗಳಿಸಿ ಸಂಭ್ರಮಿಸಿತು.
ಮೊದಲ ಎರಡು ಪಂದ್ಯಗಳನ್ನು ವೆಸ್ಟ್ ಇಂಡೀಸ್ ಗೆದ್ದಿತ್ತು. 3 ಮತ್ತು 4ನೇ ಪಂದ್ಯಗಳನ್ನು ಜಯಿಸುವ ಮೂಲಕ ಭಾರತ ಕಮ್‌ಬ್ಯಾಕ್ ಮಾಡಿತ್ತು. ಆದರೆ, 5ನೇ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಸರಣಿ ಕೈಚೆಲ್ಲಿದೆ.
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಾರ್ದಿಕ್, ‘ನಾವು ಸಾಕಷ್ಟು ಪ್ರಯತ್ನ ಮಾಡಿದೆವು, ಆದರೆ, ಪರಿಸ್ಥಿತಿಯ ಲಾಭ ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಜತೆಗೆ ಪಂದ್ಯದ ಸೋಲಿನ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸಿದ್ದೇನೆ. ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್‌ರಂತಹ ಯುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದ್ದಾರೆ.
‘ಸೋಲು ಮತ್ತು ಗೆಲುವು ಆಟದ ಒಂದು ಭಾಗ. ಸೋಲಿನಿಂದಾಗಿ ಹಲವು ಪಾಠಗಳನ್ನು ಕಲಿಯಬಹುದು. ನಮಗೆ ಸೋಲು– ಗೆಲುವಿನ ಲೆಕ್ಕಾಚಾರ ಮಾಡಲು ಸಾಕಷ್ಟು ಸಮಯವಿದೆ. ಕೆಲವೊಮ್ಮೆ ಸೋಲುವುದು ಒಳ್ಳೆಯದು’ ಎಂದು ಹಾರ್ದಿಕ್ ಅಭಿಪ್ರಾಯಪಟ್ಟಿದ್ದಾರೆ.
ಓದಿ... IND vs WI: ಭಾರತದ ವಿರುದ್ಧ 3–2ರಿಂದ ಟಿ–20 ಸರಣಿ ಜಯಿಸಿದ ವೆಸ್ಟ್ ಇಂಡೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.