ADVERTISEMENT

T20 World Cup | ಸೆಮಿಫೈನಲ್‌ಗೆ ದ.ಆಫ್ರಿಕಾ; ಆತಿಥೇಯ ತಂಡಗಳೇ ಟೂರ್ನಿಯಿಂದ ಔಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2024, 9:51 IST
Last Updated 24 ಜೂನ್ 2024, 9:51 IST
<div class="paragraphs"><p>ಆತಿಥೇಯ ತಂಡಗಳಾದ ವೆಸ್ಟ್ ಇಂಡೀಸ್‌&nbsp;(ಎಡ) ಹಾಗೂ ಅಮೆರಿಕ (ಬಲ) ಆಟಗಾರರು</p></div>

ಆತಿಥೇಯ ತಂಡಗಳಾದ ವೆಸ್ಟ್ ಇಂಡೀಸ್‌ (ಎಡ) ಹಾಗೂ ಅಮೆರಿಕ (ಬಲ) ಆಟಗಾರರು

   

ಪಿಟಿಐ ಚಿತ್ರಗಳು

ಆ್ಯಂಟಿಗಾ: ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 'ಸೂಪರ್‌ 8' ಹಂತದ 'ಬಿ' ಗುಂಪಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್‌ ವಿರುದ್ಧ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ತಂಡ 'ಸೆಮಿಫೈನಲ್‌' ಹಂತಕ್ಕೆ ಲಗ್ಗೆ ಇಟ್ಟಿದೆ.

ADVERTISEMENT

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಆಡಿರುವ ಏಳೂ ಪಂದ್ಯಗಳನ್ನು ಗೆಲ್ಲುವ ಮೂಲಕ ಆಫ್ರಿಕಾ ತಂಡ ಅಜೇಯವಾಗಿ ಈ ಸಾಧನೆ ಮಾಡಿದೆ. ಇತ್ತ, ಒಂದೇ ಗುಂಪಿನಲ್ಲಿದ್ದ ಎರಡೂ ಆತಿಥೇಯ ತಂಡಗಳು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿವೆ.

ಇಲ್ಲಿನ ನಾರ್ತ್‌ ಸೌಂಡ್‌ನಲ್ಲಿರುವ ಸರ್‌. ವಿವ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 135 ರನ್‌ ಗಳಿಸಿತ್ತು. ರೋಸ್ಟನ್‌ ಚೇಸ್‌ (52) ಅರ್ಧಶತಕ ಗಳಿಸಿದರು.

ಈ ಗುರಿ ಎದುರು ದಕ್ಷಿಣ ಆಫ್ರಿಕಾ 15 ರನ್ ಆಗುವಷ್ಟರಲ್ಲೇ 2 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಮಳೆ ಸುರಿಯಿತು. ಹೀಗಾಗಿ, ಓವರ್‌ಗಳನ್ನು 17ಕ್ಕೆ ಕಡಿತಗೊಳಿಸಿ 123 ರನ್‌ಗಳ ಪರಿಷ್ಕೃತ ಗುರಿ ನಿಗದಿಪಡಿಸಲಾಯಿತು.

ಆಫ್ರಿಕಾ ತಂಡ ಈ ಗುರಿಯನ್ನು 16.1 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. 14 ಎಸೆತಗಳಲ್ಲಿ 21 ರನ್‌ ಗಳಿಸಿದ ಮಾರ್ಕೊ ಯಾನ್ಸನ್‌ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ವೆಸ್ಟ್‌ ಇಂಡೀಸ್‌ ಬೌಲರ್‌ಗಳು ಕೊನೇವರೆಗೂ ಹೋರಾಟ ನಡೆಸಿದರಾದರೂ, ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

'ಸೂಪರ್‌ 8' ಹಂತದ 'ಬಿ' ಗುಂಪಿನಿಂದ ಮತ್ತೊಂದು ತಂಡವಾಗಿ ಇಂಗ್ಲೆಂಡ್‌ ನಾಕೌಟ್‌ ಸುತ್ತಿಗೆ ಪ್ರವೇಶ ಪಡೆದಿದೆ. ಇದೇ ಗುಂಪಿನಲ್ಲಿದ್ದ ಅಮೆರಿಕ ಸಹ ಟೂರ್ನಿಯಿಂದ ನಿರ್ಗಮಿಸಿದೆ.

'ಎ' ಗುಂಪಿನಿಂದ ನಾಲ್ಕೂ ತಂಡಗಳಿಗೆ ಅವಕಾಶ
'ಸೂಪರ್‌ 8' ಹಂತದ 'ಎ' ಗುಂಪಿನಿಂದ ಯಾವ ತಂಡಕ್ಕೂ 'ಸೆಮಿ' ಟಿಕೆಟ್‌ ಖಾತ್ರಿಯಾಗಿಲ್ಲ.

ಆಡಿರುವ ಎರಡೂ ಪಂದ್ಯ ಗೆದ್ದಿರುವ ಭಾರತ, ತಲಾ ಒಂದೊಂದು ಪಂದ್ಯ ಜಯಿಸಿರುವ ಆಸ್ಟ್ರೇಲಿಯಾ, ಅಫ್ಗಾನಿಸ್ತಾನ ಮತ್ತು ಎರಡೂ ಪಂದ್ಯಗಳಲ್ಲಿ ಸೋತಿರುವ ಬಾಂಗ್ಲಾದೇಶಕ್ಕೆ ಮುಂದಿನ ಹಂತಕ್ಕೇರುವ ಅವಕಾಶವಿದೆ.

ಇಂದು ರಾತ್ರಿ ಭಾರತ ಮತ್ತು ಆಸ್ಟ್ರೇಲಿಯಾ, ನಾಳೆ ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ.

ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ, ನೇರವಾಗಿ ಸೆಮಿ ತಲುಪಲಿದೆ. ನಾಳಿನ ಪಂದ್ಯದಲ್ಲಿ ಯಾರೇ ಗೆದ್ದರೂ, ಮುಂದಿನ ಹಂತಕ್ಕೇರಲು ರನ್‌ರೇಟ್‌ ಮುಖ್ಯ ಪಾತ್ರವಹಿಸುತ್ತದೆ.

ಒಂದುವೇಳೆ ಇಂದು ಆಸ್ಟ್ರೇಲಿಯಾ ಗೆದ್ದರೆ, ಬಾಂಗ್ಲಾದೇಶ ಹೊರಬೀಳಲಿದೆ. ಆದರೆ, ಅಫ್ಗಾನಿಸ್ತಾನಕ್ಕೆ ಗೆಲುವೊಂದೇ ದಾರಿಯಾಗಲಿದೆ. ಹಾಗೇನಾದರೂ ಆದರೆ, ಭಾರತ, ಆಸಿಸ್ ಮತ್ತು ಅಫ್ಗಾನಿಸ್ತಾನ –ಮೂರು ತಂಡಗಳಲ್ಲಿ ಎರಡಕ್ಕೆ ರನ್‌ರೇಟ್‌ ಆಧಾರದಲ್ಲಿ ಅದೃಷ್ಟ ಒಲಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.