ADVERTISEMENT

ಅಗತ್ಯವಿದ್ದರೆ ಪಂತ್ ಅವರನ್ನು ದೆಹಲಿಗೆ ಏರ್‌ಲಿಫ್ಟ್ ಮಾಡಲಾಗುವುದು: ಡಿಡಿಸಿಎ

ಐಎಎನ್ಎಸ್
Published 31 ಡಿಸೆಂಬರ್ 2022, 7:05 IST
Last Updated 31 ಡಿಸೆಂಬರ್ 2022, 7:05 IST
ರಿಷಭ್‌ ಪಂತ್‌
ರಿಷಭ್‌ ಪಂತ್‌    

ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಗೆ ಸ್ಥಳಾಂತರಿಸಲಾಗುವುದು ಎಂದುದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ರೋಹನ್‌ ಜೇಟ್ಲಿ ಶನಿವಾರ ಹೇಳಿದ್ದಾರೆ.

ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದಪಂತ್‌ ಅವರಿದ್ದ ಮರ್ಸಿಡಿಸ್‌ ಬೆಂಜ್‌ ಕಾರು ದೆಹಲಿ–ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಅಪಘಾತಕ್ಕೀಡಾಗಿತ್ತು.ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಆವರಿಸುವ ಮುನ್ನವೇ ಹೊರಬಂದ ಕಾರಣ ಪಂತ್‌ ಬದುಕುಳಿದಿದ್ದರು.

'ವೈದ್ಯರು ಸಲಹೆ ನೀಡಿದರೆ, ಪ್ಲಾಸ್ಟಿಕ್‌ ಸರ್ಜರಿ ಸಲುವಾಗಿ ರಿಷಭ್‌ ಪಂತ್‌ ಅವರನ್ನು ದೆಹಲಿಗೆ ಏರ್‌ಲಿಫ್ಟ್‌ ಮಾಡಲಾಗುವುದು. ನಾವು ಡೆಹ್ರಾಡೂನ್‌ನಲ್ಲಿರುವ ಮ್ಯಾಕ್ಸ್‌ (ಪಂತ್‌ ಅವರನ್ನು ದಾಖಲಿಸಲಾಗಿರುವ) ಆಸ್ಪತ್ರೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ' ಎಂದು ರೋಹನ್ ತಿಳಿಸಿದ್ದಾರೆ.

ADVERTISEMENT

‘ಕಾಲು ಅಥವಾ ಕೈಯ ಮೂಳೆಗೆ ಯಾವುದೇ ಏಟಾಗಿಲ್ಲ ಎಂಬುದು ಎಕ್ಸ್‌ರೇ ವರದಿಯಲ್ಲಿ ತಿಳಿದುಬಂದಿದೆ. ಬಲಗಾಲಿನ ಮಂಡಿಯ ಲಿಗಮೆಂಟ್‌ (ಅಸ್ಥಿರಜ್ಜು) ಹರಿದಿರುವುದು ಪರೀಕ್ಷೆಯಲ್ಲಿ ಗೊತ್ತಾಗಿದೆ. ಆದರೆ ಗಾಯದ ಗಂಭೀರತೆ ಎಷ್ಟು ಎಂಬುದು ಎಂಆರ್‌ಐ ಸ್ಕ್ಯಾನಿಂಗ್‌ ಬಳಿಕವೇ ತಿಳಿಯಲಿದೆ’ ಎಂದು ಶುಕ್ರವಾರ ವೈದ್ಯರು ಹೇಳಿದ್ದರು.

ಬೆಂಕಿಯಿಂದಾಗಿ ಮುಖಕ್ಕೆ ಆಗಿರುವ ಗಾಯದ ಗುರುತು ಸರಿಪಡಿಸಲು ಪ್ಲಾಸ್ಟಿಕ್‌ ಸರ್ಜರಿಗೆ ನಡೆಸಲಾಗುತ್ತಿದೆ. ನೋವು ಮತ್ತು ಪೆಟ್ಟು ಬಿದ್ದಿದ್ದ ಭಾಗಗಳಲ್ಲಿ ಊತ ಇದ್ದುದರಿಂದಎಂಆರ್‌ಐ ಸ್ಕ್ಯಾನಿಂಗ್‌ ಅನ್ನು ಶನಿವಾರಕ್ಕೆ ಮುಂದೂಡಲಾಗಿದೆ ಎಂದಿದ್ದರು.

ನಗದು ಕಳ್ಳತನವಾಗಿಲ್ಲ:ಅಪಘಾತಕ್ಕೀಡಾದ ಕಾರಿನಲ್ಲಿದ್ದ ನಗದು ಮತ್ತು ಇತರ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಆಧಾರರಹಿತವಾದವು. ಕಾರಿನಲ್ಲಿದ್ದ ಪ್ಲಾಟಿನಂ ಚೈನ್, ಚಿನ್ನದ ಬಳೆ ಮತ್ತು ₹4000 ನಗದು ಪಂತ್‌ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದುಹರಿದ್ವಾರದ ಎಸ್ಪಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.