ADVERTISEMENT

ಭಾರತ–ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ: ಕೆರಿಬಿಯನ್ ಬಳಗಕ್ಕೆ ಶಿಖರ್ ಸೆಡ್ಡು

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 18:30 IST
Last Updated 21 ಜುಲೈ 2022, 18:30 IST
ಶಿಖರ್ ಧವನ್ 
ಶಿಖರ್ ಧವನ್    

ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್: ಏಕದಿನ ಮಾದರಿಯ ಕ್ರಿಕೆಟ್ ಅಸ್ತಿತ್ವದ ಕುರಿತ ಚರ್ಚೆ ಈಗ ಜೋರಾಗಿಯೇ ನಡೆಯುತ್ತಿದೆ.ಇದೇ ಹೊತ್ತಿನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ಏಕದಿನ ಕ್ರಿಕೆಟ್ ಸರಣಿಯು ಶುಕ್ರವಾರ ಆರಂಭವಾಗಲಿದೆ.

ಅನುಭವಿ ಮತ್ತು ಪ್ರಮುಖ ಆಟಗಾರರು ವಿಶ್ರಾಂತಿ ಪಡೆದಿರುವ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಯುವ ಆಟಗಾರರ ಬಳಗಕ್ಕೆ ನಿಕೋಲಸ್ ಪೂರನ್ ನಾಯಕತ್ವದ ವಿಂಡೀಸ್ ಪಡೆಯು ಸವಾಲೊಡ್ಡಲಿದೆ.ಹೋದ ಫೆಬ್ರುವರಿಯಲ್ಲಿ ವಿಂಡೀಸ್ ಬಳಗವು ಭಾರತ ಪ್ರವಾಸ ಮಾಡಿತ್ತು. ಆಗ ಉಭಯ ತಂಡಗಳು ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಗಳನ್ನು ಆಡಿತ್ತು. ಈ ಬಾರಿ ಆತಿಥೇಯ ವಿಂಡೀಸ್ ಮತ್ತು ಭಾರತ ತಂಡಗಳು ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್ ಇದೇ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಈ ಮಾದರಿಯಬಗ್ಗೆ ಆಟಗಾರರಿಗೆ ಹೆಚ್ಚು ಒಲವು ಇರುವುದು ಸಹಜ. ಅದರಿಂದಾಗಿ ಏಕದಿನ ಮಾದರಿಯ ಆಕರ್ಷಣೆ ಕಡಿಮೆಯಾಗಿದೆ. ಕಳೆದ ಕೆಲವು ಸಮಯದಿಂದ ಶಿಖರ್ ಧವನ್ ಏಕದಿನ ಮಾದರಿಯಲ್ಲಿ ಆಡುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದಾರೆ.

ADVERTISEMENT

ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರು ವಿಶ್ರಾಂತಿ ಪಡೆದಿರುವುದರಿಂದ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಮೆರೆಯಲು ಈ ಸರಣಿಯಲ್ಲಿ ಅವಕಾಶ ಸಿಗಲಿದೆ.

ಶುಭಮನ್ ಗಿಲ್ ಮತ್ತು ಋತುರಾಜ್ ಗಾಯಕವಾಡ, ಅಮೋಘ ಲಯದಲ್ಲಿರುವ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಕೌಶಲದ ಮೂಲಕ ಗಮನ ಸೆಳೆಯಲು ಉತ್ಸುಕರಾಗಿದ್ದಾರೆ. ಆವೇಶ್ ಖಾನ್, ಪ್ರಸಿದ್ಧಕೃಷ್ಣ ಮತ್ತು ಆರ್ಷದೀಪ್ ಸಿಂಗ್ ಅವರಿಗೂ ತಮ್ಮ ಖಾತೆಗೆ ವಿಕೆಟ್‌ಗಳನ್ನು ಸೇರಿಸಿಕೊಳ್ಳಲು ಸದವಕಾಶ. ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವರಿಗೂ ಅಂತಿಮ ಹನ್ನೊಂದರಲ್ಲಿ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆ ಇದೆ.

ವಿಂಡೀಸ್ ತಂಡವು ಇತ್ತೀಚೆಗೆ ಬಾಂಗ್ಲಾ ವಿರುದ್ಧ ತನ್ನದೇ ನೆಲದಲ್ಲಿ ಸರಣಿ ಸೋತಿದೆ. ಈಗ ಪುಟಿದೇಳುವ ಛಲದಲ್ಲಿದೆ. ಆಲ್‌ರೌಂಡರ್ ಜೇಸನ್ ಹೋಲ್ಡರ್ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಇನಿಂಗ್ಸ್‌ನ ಸಂಪೂರ್ಣ 50 ಓವರ್‌ಗಳನ್ನು ಆಡುವುದೇ ತಂಡದ ಮುಂದಿರುವ ಸವಾಲು.

2019ರ ವಿಶ್ವಕಪ್ ಟೂರ್ನಿಯ ನಂತರ ವಿಂಡೀಸ್ ತಂಡವು 39 ಇನಿಂಗ್ಸ್‌ ಆಡಿದೆ. ಆದರೆ ಅದರಲ್ಲಿ ಆರು ಬಾರಿ ಮಾತ್ರ 50 ಓವರ್‌ಗಳನ್ನು ಆಡಿದೆ.

‘ಭಾರತದ ಉತ್ತಮ ಬೌಲಿಂಗ್ ಪಡೆಯನ್ನು ಎದುರಿಸಿ 50 ಓವರ್‌ ಬ್ಯಾಟಿಂಗ್ ಮಾಡುವ ಸವಾಲನ್ನು ಯಶಸ್ವಿಯಾಗಿ ಎದುರಿಸಬೇಕಿದೆ’ ಎಂದು ವಿಂಡೀಸ್ ಮುಖ್ಯ ಕೋಚ್ ಫಿಲ್ ಸಿಮನ್ಸ್ ಕೂಡ ಹೇಳಿದ್ದಾರೆ.

ತಂಡಗಳು

ಭಾರತ: ಶಿಖರ್ ಧವನ್ (ನಾಯಕ), ರವೀಂದ್ರ ಜಡೇಜ (ಉಪನಾಯಕ) ಋತುರಾಜ್ ಗಾಯಕವಾಡ, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ಇಬ್ಬರೂ ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧಕೃಷ್ಣ, ಮೊಹಮ್ಮದ್ ಸಿರಾಜ್, ಆರ್ಷದೀಪ್ ಸಿಂಗ್

ವೆಸ್ಟ್ ಇಂಡೀಸ್: ನಿಕೊಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಾಮ್ರಾ ಬ್ರೂಕ್ಸ್, ಕೀಚಿ ಕಾರ್ಟಿ, ಜೇಸನ್ ಹೋಲ್ಡರ್, ಅಕೀಲ್ ಹುಸೇನ್, ಅಲ್ಜರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಗಡಕೇಶ್ ಮೋಟೀ, ಕೀಮೊ ಪಾಲ್, ರೋವ್ಮನ್ ಪೊವೆಲ್. ಜೇಡನ್ ಸೀಲ್ಸ್.

ಪಂದ್ಯ ಆರಂಭ: ರಾತ್ರಿ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.