ADVERTISEMENT

ಸಚಿನ್ ಬ್ಯಾಟಿಂಗ್; ಜಾಂಟಿ ಸೂಪರ್ ಫೀಲ್ಡಿಂಗ್

ವಿಶ್ವಕಪ್‌ ಹೆಜ್ಜೆ ಗುರುತು

​ಪ್ರಜಾವಾಣಿ ವಾರ್ತೆ
Published 13 ಮೇ 2019, 7:16 IST
Last Updated 13 ಮೇ 2019, 7:16 IST
ಜಾಂಟಿ ರೋಡ್ಸ್‌
ಜಾಂಟಿ ರೋಡ್ಸ್‌   

ಈ ವಿಶ್ವಕಪ್‌ನಲ್ಲಿ ಭಾರತ ತಂಡದ ಪಾಲಿಗೆ ಮಳೆಯೇ ‘ವಿಲನ್‌’ ಆಗಿ ಪರಿಣಮಿಸಿತು. ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲುವು ಒಲಿಯಿತು. ಒಂಬತ್ತು ತಂಡಗಳಿದ್ದ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದು ಲೀಗ್‌ನಲ್ಲಿ ಹೋರಾಟ ಅಂತ್ಯಗೊಳಿಸಿತು. ನೆನಪಿನಲ್ಲಿ ಉಳಿಯಬಹುದಾದ ಪಂದ್ಯವೆಂದರೆ ಪಾಕ್‌ ಎದುರಿನದು. ಜೊತೆಗೆ ಚೊಚ್ಚಲ ವಿಶ್ವಕಪ್‌ನಲ್ಲಿ ಆಡಿದ ಸಚಿನ್‌ ತೆಂಡೂಲ್ಕರ್‌ ಭರವಸೆ ಮೂಡಿಸಿದರು.

*ಲೀಗ್‌ ಹಂತದಲ್ಲಿ ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ ಮಾತ್ರ ಭಾರತಕ್ಕೆ ಗೆಲುವು ಒಲಿಯಿತು.

*ಮಳೆ ಅಡಚಣೆಯಿಂದಾಗಿ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಭಾರತ ಆಘಾತ ಅನುಭವಿಸಬೇಕಾಯಿತು. ಕಾಂಗರೂ ಪಡೆ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 237 ರನ್‌ ಗಳಿಸಿತ್ತು. ಮಳೆಯಿಂದಾಗಿ ಭಾರತಕ್ಕೆ 47 ಓವರ್‌ಗಳಲ್ಲಿ 236 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಆದರೆ, ಮೊಹಮ್ಮದ್‌ ಅಜರುದ್ದಿನ್‌ ಬಳಗ ಕೇವಲ 1 ರನ್‌ನಿಂದ ಸೋಲು ಕಂಡಿತು.

ADVERTISEMENT

*ಮಳೆ ಕಾರಣ ಭಾರತ–ಶ್ರೀಲಂಕಾ ನಡುವಣ ಪಂದ್ಯ ರದ್ದಾಯಿತು. ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌ ಎದುರಿನ ಪಂದ್ಯಗಳಿಗೂ ಮಳೆ ಅಡ್ಡಿಯಾಯಿತು. ಪರಿಷ್ಕೃತ ಗುರಿ ಪಡೆದ ಈ ತಂಡಗಳು ಭಾರತ ವಿರುದ್ಧ ಗೆದ್ದವು.

*ಗೆದ್ದ ಎರಡೂ ಪಂದ್ಯಗಳಲ್ಲಿ ಸಚಿನ್‌ ತೆಂಡೂಲ್ಕರ್‌ ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಪಾತ್ರರಾದರು. ಅವರು ಈ ವಿಶ್ವಕಪ್‌ನಲ್ಲಿ ಒಟ್ಟು 283 ರನ್‌ ಗಳಿಸಿದರು. ವೆಸ್ಟ್‌ಇಂಡೀಸ್‌ನ ಬ್ರಯನ್‌ ಲಾರಾ 333 ರನ್‌ ಕಲೆಹಾಕಿದರು.

*ಲೀಗ್‌ ಹಂತದಲ್ಲಿ ಆತಿಥೇಯ ನ್ಯೂಜಿಲೆಂಡ್‌ ಅಕ್ಷರಶಃ ಆರ್ಭಟಿಸಿತು. ಆಡಿದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಜಯಭೇರಿ ಮೊಳಗಿಸಿತು. ಪಾಕಿಸ್ತಾನ ಎದುರು ಮಾತ್ರ ಮುಗ್ಗರಿಸಿತು.

*ಚಾಂಪಿಯನ್‌ ಆಸ್ಟ್ರೇಲಿಯಾ ಮಾತ್ರ ಲೀಗ್‌ನಲ್ಲೇ ಹೊರಬಿದ್ದಿತು. ಆತಿಥೇಯರಿಗೆ ಇದೊಂದು ದೊಡ್ಡ ಆಘಾತ ಕೂಡ. ಲೀಗ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡರು.

*ಆರಂಭದಲ್ಲಿ ಎಡವಿದ್ದು ಇಮ್ರಾನ್ ಖಾನ್‌ ಪಡೆ ಬಳಿಕ ಪುಟಿದಿದ್ದೆತು. ಲೀಗ್‌ ಹಂತದಲ್ಲಿ ನಾಲ್ಕನೇ ಸ್ಥಾನ ಪಡೆದು ಸೆಮಿಫೈನಲ್‌ನಲ್ಲಿ ಆಡಲು ಅವಕಾಶ ಪಡೆಯಿತು.

*ಟೂರ್ನಿಯ ಮತ್ತೊಂದು ಅಚ್ಚರಿ ಎಂದರೆ ‘ಕ್ರಿಕೆಟ್‌ ಶಿಶು’ ಜಿಂಬಾಬ್ವೆ ತಂಡದವರು ಇಂಗ್ಲೆಂಡ್‌ ವಿರುದ್ಧ ಗೆಲುವು ಸಾಧಿಸಿದ್ದು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಕೇವಲ 134 ರನ್‌ಗಳಿಗೆ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಆಂಗ್ಲ ಪಡೆ ಕೇವಲ 125 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಆದರೆ, ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್‌ ತಂಡದವರು ನಾಲ್ಕರ ಘಟ್ಟದಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಂಡರು.

*ಮೊದಲ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ ದಕ್ಷಿಣ ಆಫ್ರಿಕಾ ತಂಡದವರು ಆತಿಥೇಯ ಆಸ್ಟ್ರೇಲಿಯಾ ಎದುರು ಗೆಲ್ಲುವ ಮೂಲಕ ಶುಭಾರಂಭ ಮಾಡಿದರು. ಅಷ್ಟೇ ಅಲ್ಲ; ಮೂರನೇ ಸ್ಥಾನ ಪಡೆದು ಸೆಮಿಫೈನಲ್‌ ಪ್ರವೇಶಿಸಿದರು.

*ಪಾಕಿಸ್ತಾನ ವಿರುದ್ಧದ ಲೀಗ್‌ ಪಂದ್ಯದಲ್ಲಿ ಜಾಂಟಿ ರೋಡ್ಸ್‌ ಅವರು ಗಾಳಿಯಲ್ಲಿ ಹಾರಿ ಇಂಜಮಾಮ್‌ ಉಲ್‌ ಹಕ್‌ ಅವರನ್ನು ರನ್‌ ಔಟ್ ಮಾಡಿದ್ದ ಪರಿ ಸ್ಮರಣೀಯ. ಡೀಪ್‌ ಬ್ಯಾಕ್‌ವುಡ್ ಪಾಯಿಂಟ್‌ ನಿಂದ ಚೆಂಡು ಹಿಡಿದು ಓಡಿ ಬಂದ ಜಾಂಟಿ ಹದ್ದಿನಂತೆ ಗಾಳಿಯಲ್ಲಿ ಹಾರಿ ಚೆಂಡನ್ನು ವಿಕೆಟ್‌ಗೆ ತಾಗಿಸಿದರು. ಮೂರು ಸ್ಟಿಕ್‌ಗಳು ನೆಲಕ್ಕುರುಳಿದವು. ಕ್ರೀಸ್‌ನಿಂದ ತುಸು ದೂರವೇ ಇದ್ದ ಇಂಜಮಾಮ್ ರನ್‌ಔಟ್ ಆದರು. ದಶಕಗಳು ಉರುಳಿದರು ಜಾಂಟಿಯ ಆ ಸೂಪರ್‌ ಮ್ಯಾನ್ ಶೋ ಅಚ್ಚಳಿಯದೇ ಉಳಿದಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 20 ರನ್‌ಗಳಿಂದ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.