ADVERTISEMENT

Asia cup: ಚಾಮರಿ ಮಿಂಚಿನ ಅಜೇಯ ಶತಕ- ಲಂಕಾಕ್ಕೆ ಸವಾಲೇ ಆಗದ ಮಲೇಷ್ಯಾ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 16:05 IST
Last Updated 22 ಜುಲೈ 2024, 16:05 IST
ಚಾಮರಿ ಅಟ್ಟಪಟ್ಟು
ಎಕ್ಸ್ ಚಿತ್ರ
ಚಾಮರಿ ಅಟ್ಟಪಟ್ಟು ಎಕ್ಸ್ ಚಿತ್ರ   

ದಂಬುಲಾ: ಆರಂಭ ಆಟಗಾರ್ತಿ ಚಾಮರಿ ಅಟ್ಟಪಟ್ಟು ಅವರ ಅಜೇಯ ಶತಕದ (119*, 69 ಎಸೆತ) ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ, ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 144 ರನ್‌ಗಳಿಂದ ಸದೆಬಡಿಯಿತು.

‘ಬಿ’ ಗುಂಪಿನ ಈ ಪಂದ್ಯದಲ್ಲಿ ನಾಯಕಿ ಚಾಮರಿ ಅವರ ಶತಕದ ನಂತರ, ಲಂಕಾ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡಿದರು. ಬ್ಯಾಟ್‌ ಮಾಡಲು ನಿರ್ಧರಿಸಿದ ಲಂಕಾ ಮೊದಲು ಆಡಿ 4 ವಿಕೆಟ್‌ಗೆ 184 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಮಲೇಷ್ಯಾ ಕೇವಲ ಒಂದು ಎಸೆತ ಉಳಿದಿರುವಂತೆ ಬರೇ 40 ರನ್ನಿಗೆ ಉರುಳಿತು. ಮೂರನೇ ಕ್ರಮಾಂಕದ ಆಟಗಾರ್ತಿ ಎಲ್ಸಾ ಹಂಟರ್ (10) ಬಿಟ್ಟರೆ ಉಳಿದವರು ಯಾರೂ ಎರಡಂಕಿ ತಲುಪಲಿಲ್ಲ.

ಲಂಕಾ ಬೌಲರ್‌ಗಳ ಪೈಕಿ, 15 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ಶಶಿನಿ ಗಿಮ್ಹಾನಿ ತಮ್ಮ ಪಾಲಿನ 4 ಓವರುಗಳಲ್ಲಿ 9 ರನ್ನಿಗೆ 3 ವಿಕೆಟ್‌ ಪಡೆದು ಮಿಂಚಿದರು.

ADVERTISEMENT

ಇದಕ್ಕೆ ಮೊದಲು ಲಂಕಾ ಖಾತೆ ತೆರೆಯುವ ಮೊದಲೇ ವಿಶ್ಮಿ ಗುಣರತ್ನೆ ನಿರ್ಗಮಿಸಿದರು. ಆದರೆ ಚಾಮರಿ, ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿಯಾದರು. ಹರ್ಷಿತಾ ಸಮರವಿಕ್ರಮ (26) ಜೊತೆ 64 ರನ್ ಸೇರಿಸಿದ ಅವರು, ನಂತರ ಅನುಷ್ಕಾ ಸಂಜೀವನಿ (31) ಜೊತೆ ಮೂರನೇ ವಿಕೆಟ್‌ಗೆ115 ರನ್ ಸೇರಿಸಿದರು. ಮೊದಲು ಎಚ್ಚರಿಕೆಯಿಂದ ಆಡಿದ ಅವರು ಪವರ್‌ಪ್ಲೇ ನಂತರ ಆಕ್ರಮಣಕಾರಿಯಾದರು. ಅವರ ಇನಿಂಗ್ಸ್‌ನಲ್ಲಿ 14 ಬೌಂಡರಿ, ಏಳು ಸಿಕ್ಸರ್‌ಗಳಿದ್ದವು.

ಸ್ಕೋರುಗಳು: ಶ್ರೀಲಂಕಾ: 20 ಓವರುಗಳಲ್ಲಿ 4 ವಿಕೆಟ್‌ಗೆ 184 (ಚಾಮರಿ ಅಟ್ಟಪಟ್ಟು ಔಟಾಗದೇ 119, ಹರ್ಷಿತಾ ಸಮರವಿಕ್ರಮ 26, ಅನುಷ್ಕಾ ಸಂಜೀವನಿ 31; ವಿನಿಫ್ರೆಡ್‌ ದುರೈಸಿಂಘಂ 34ಕ್ಕೆ2); ಮಲೇಷ್ಯಾ: 19.5 ಓವರುಗಳಲ್ಲಿ 40 (ಎಲ್ಸಾ ಹಂಟರ್ 10, ಐನಾ ನಜ್ವಾ ಔಟಾಗದೇ 9; ಕಾವ್ಯಾ ಕವಿಂದಿ 7ಕ್ಕೆ2, ಶಶಿನಿ ಗಿಮ್ಹಾನಿ 9ಕ್ಕೆ3, ಕವಿಶಾ ದಿಲ್ಹಾರಿ 4ಕ್ಕೆ2). ಪಂದ್ಯದ ಆಟಗಾರ್ತಿ: ಚಾಮರಿ ಅಟ್ಟಪಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.