ನವದೆಹಲಿ: ಆಸ್ಟ್ರೇಲಿಯನ್ ಆಲ್‌ರೌಂಡರ್ ಎಲಿಸ್ ಪೆರಿ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ದಾಖಲೆ ಮಾಡಿದರು.
ಪೆರಿ (4–0–15–6 ಹಾಗೂ ಔಟಾಗದೆ 40) ಅವರ ಆಲ್‌ರೌಂಡ್ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 7 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು ಮತ್ತು ಪ್ಲೇ ಆಫ್ ಹಂತ ತಲುಪಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ 113 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿಗೆ ನೀಡಿತು. ಡಬ್ಲ್ಯುಪಿಎಲ್‌ನಲ್ಲಿ ಪೆರಿ ಅವರ ಸಾಧನೆಯು ಶ್ರೇಷ್ಠ ಬೌಲಿಂಗ್ ದಾಖಲೆ ಗೌರವ ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದ್ದು ಕೂಡ ಎಲಿಸ್ ಪೆರಿ ಅವರೇ.
39 ರನ್‌ಗಳಿಗೇ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್‌ಸಿಬಿಗೆ ಪೆರಿ (38 ಎಸೆತಗಳಲ್ಲಿ 40 ರನ್) ಆಸರೆಯಾದರು. ಅವರೊಂದಿಗೆ ಜೊತೆಗೂಡಿದ ರಿಚಾ ಘೋಷ್ (ಔಟಾಗದೆ 36) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿದರು.
ಇದರಿಂದಾಗಿ ಇನಿಂಗ್ಸ್‌ನಲ್ಲಿ ಇನ್ನೂ ಐದು ಓವರ್‌ಗಳು ಬಾಕಿಯಿರುವಾಗಲೇ ತಂಡವು ಗೆಲುವಿನ ಗಡಿ ದಾಟಿತು.
ಐತಿಹಾಸಿಕ ಬೌಲಿಂಗ್: ಟಾಸ್ ಗೆದ್ದ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡಕ್ಕೆ ಹೆಯಲಿ ಮ್ಯಾಥ್ಯೂಸ್ (26; 23ಎ) ಮತ್ತು ಸಜೀವನ್ ಸಜನಾ (30; 21ಎ) ಜೋಡಿಯು ಪವರ್‌ಪ್ಲೇನಲ್ಲಿ 43 ರನ್ ಸೇರಿಸಿದರು.
ಇದರಿಂದಾಗಿ ತಂಡವು ದೊಡ್ಡ ಮೊತ್ತ ಪೇರಿಸುವ ಭರವಸೆ ಮೂಡಿತ್ತು.
ಆದರೆ, ಆರನೇ ಓವರ್‌ನಲ್ಲಿ ಸೋಫಿ ಡಿವೈನ್ ಬೌಲಿಂಗ್‌ನಲ್ಲಿ ಮ್ಯಾಥ್ಯೂಸ್ ಕ್ಯಾಚ್ ಪಡೆದ ಎಲಿಸ್ ಪೆರಿ ಸಂಭ್ರಮಿಸಿದರು. ನಂತರ ಬೌಲಿಂಗ್‌ನಲ್ಲಿ ಆರ್ಭಟಿಸಿದರು.
ಒಂಬತ್ತನೇ ಓವರ್‌ನಲ್ಲಿ ಸಜನಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಡಗ್‌ಔಟ್ ಮಾರ್ಗ ತೋರಿಸಿದರು. 11ನೇ ಓವರ್‌ನಲ್ಲಿ ಅಮೆಲಿಯಾ ಕೆರ್ ಹಾಗೂ ಅಮನ್ಜೋತ್ ಕೌರ್ ಅವರಿಗೂ ಕಾಲೂರಲು ಬಿಡಲಿಲ್ಲ. ಅವರ ನೇರ ಎಸೆತಗಳಿಗೆ ಬ್ಯಾಟರ್‌ಗಳು ಎಲ್‌ಬಿಡಬ್ಲ್ಯು ಮತ್ತು ಕ್ಲೀನ್ ಬೌಲ್ಡ್ ಆದರು. ಪೂಜಾ ವಸ್ತ್ರಕರ್ ಮತ್ತು ನತಾಲಿ ಶಿವರ್ ಬ್ರಂಟ್ (10 ರನ್) ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಉಳಿದ ಎರಡು ವಿಕೆಟ್‌ಗಳು ಸೋಫಿ ಮಾಲಿನೆ ಮತ್ತು ಬೆಂಗಳೂರಿನ ಆಟಗಾರ್ತಿ ಶ್ರೇಯಾಂಕಾ ಪಾಟೀಲ ಅವರ ಪಾಲಾದವು. ಮುಂಬೈನ ಕೇವಲ ನಾಲ್ಕು ಬ್ಯಾಟರ್‌ಗಳು ಮಾತ್ರ ಎರಡಂಕಿ ಮುಟ್ಟಿದರು. ನಾಯಕಿ ಕೌರ್ ಖಾತೆಯನ್ನೇ ತೆರೆಯಲಿಲ್ಲ.
ಸಂಕ್ಷಿಪ್ತ ಸ್ಕೋರು:
ಮುಂಬೈ ಇಂಡಿಯನ್ಸ್: 19 ಓವರ್‌ಗಳಲ್ಲಿ 113 (ಹೆಯಲಿ ಮ್ಯಾಥ್ಯೂಸ್ 26, ಸಜೀವನ್ ಸಜನಾ 30, ಪ್ರಿಯಾಂಕಾ ಬಾಲಾ ಔಟಾಗದೆ 19, ಎಲಿಸ್ ಪೆರಿ 15ಕ್ಕೆ6) ರಾಯಲ್ ಚಾಲೆಂಜರ್ಸ್ ಬೆಂಗಳೂರು: 15 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 115 (ಎಲಿಸ್ ಪೆರಿ ಔಟಾಗದೆ 40, ರಿಚಾ ಘೋಷ್ ಔಟಾಗದೆ 36, ಶಬ್ನಿಮ್ ಇಸ್ಮಾಯಿಸ್ 19ಕ್ಕೆ1, ಹೆಯಲಿ ಮ್ಯಾಥ್ಯೂಸ್ 11ಕ್ಕೆ1) ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 7 ವಿಕೆಟ್‌ಗಳ ಜಯ.
ಪಂದ್ಯದ ಆಟಗಾರ್ತಿ: ಎಲಿಸ್ ಪೆರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.