ಲಖನೌ: ಏಕದಿನ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಮಹಿಳೆಯರು ಭಾರತದ ಎದುರಿನ ಟಿ20 ಸರಣಿಯಲ್ಲೂ ಶುಭಾರಂಭ ಮಾಡಿದರು. ಶನಿವಾರ ರಾತ್ರಿ ನಡೆದ ಮೊದಲ ಪಂದ್ಯದಲ್ಲಿ ಅನೆಕಿ ಬಾಶ್ (66; 48 ಎಸೆತ, 9 ಬೌಂಡರಿ, 1 ಸಿಕ್ಸರ್) ಮತ್ತು ನಾಯಕಿ ಸೂನ್ ಲೂಜ್ (43; 49 ಎ, 5 ಬೌಂ, 1 ಸಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ತಂಡ ಎಂಟು ವಿಕೆಟ್‌ಗಳಿಂದ ಜಯಿಸಿತು.
ಯುವ ಬ್ಯಾಟರ್ ಹರ್ಲೀನ್ ಡಿಯೋಲ್ (52; 47 ಎಸೆತ, 6 ಬೌಂಡರಿ), ಶಫಾಲಿ ವರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಮಿಂಚಿದರೂ ಭಾರತ ತಂಡ 20 ಓವರ್‌ಗಳಲ್ಲಿ ಗಳಿಸಿದ್ದು 130 ರನ್ ಮಾತ್ರ. ಶಫಾಲಿ ವರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಹಂಗಾಮಿ ನಾಯಕಿ ಸ್ಮೃತಿ ಮಂದಾನ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ತಂಡದ ಮೊತ್ತ 11 ಆಗಿದ್ದಾಗ ಅವರು ಮರಳಿದರು. ನಂತರ ಶಫಾಲಿ ಮತ್ತು 22 ವರ್ಷದ ಹರ್ಲೀನ್ ಡಿಯೋಲ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಎರಡನೇ ವಿಕೆಟ್‌ಗೆ ಇಬ್ಬರೂ 45 ರನ್ ಸೇರಿಸಿದರು. ಶಫಾಲಿ ಔಟಾದ ನಂತರ ಹರ್ಲೀನ್ ಮತ್ತು ಜೆಮಿಮಾ ರಾಡ್ರಿಗಸ್ (30; 27 ಎ, 3 ಬೌಂ) ಎದುರಾಳಿ ಬೌಲರ್‌ಗಳನ್ನು ಮತ್ತಷ್ಟು ಕಾಡಿದರು. 60 ರನ್‌ಗಳ ಜೊತೆಯಾಟ ಆಡಿದ ಇವರಿಬ್ಬರು ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಈ ನಡುವೆ ಹರ್ಲೀನ್ ಅರ್ಧಶತಕ ಪೂರೈಸಿದರು. 44 ಎಸೆತಗಳಲ್ಲಿ ಅವರ ಅರ್ಧಶತಕ ಮೂಡಿಬಂದಿತ್ತು. ಮೂರು ಎಸೆತಗಳ ಅಂತರದಲ್ಲಿ ಇವರಿಬ್ಬರನ್ನು ಅನೆಕಿ ಬಾಶ್ ವಾಪಸ್ ಕಳುಹಿಸಿದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊಣಕಾಲಿನ ನೋವಿನಿಂದಾಗಿ ಮೊದಲ ಪಂದ್ಯದಲ್ಲಿ ಆಡದೇ ಇರಲು ನಿರ್ಧರಿಸಿದ್ದರು. ಅವರ ಬದಲಿಗೆ ತಂಡವನ್ನು ಮುನ್ನಡೆಸಿದ ಮಂದಾನ ಮೊದಲ ಓವರ್‌ನಲ್ಲಿ ಎರಡು ಬೌಂಡರಿ ಸಿಡಿಸಿ ಮಿಂಚಿದರು. ಆದರೆ ಎರಡನೇ ಓವರ್‌ನಲ್ಲಿ ಕ್ಯಾಚ್ ನೀಡಿ ಮರಳಿದರು.
ಪವರ್ ಪ್ಲೇ ಮುಕ್ತಾಯದ ವೇಳೆ ಭಾರತ ಒಂದು ವಿಕೆಟ್ ಕಳೆದುಕೊಂಡು 41 ರನ್ ಗಳಿಸಿತ್ತು. 10 ಓವರ್‌ಗಳು ಮುಕ್ತಾಯಗೊಂಡಾಗ ಮೊತ್ತ ಎರಡು ವಿಕೆಟ್‌ಗಳಿಗೆ 59 ಆಗಿತ್ತು. ಸಿಕ್ಸರ್ ಸಿಡಿಸಿ ಖಾತೆ ತೆರೆದ ಶಫಾಲಿ ವರ್ಮಾ 10ನೇ ಓವರ್‌ನಲ್ಲಿ ಸ್ಟಂಪ್ ಔಟಾದರು. ಸುನೆ ಲೂಜ್ ಹಾಕಿದ 11ನೇ ಓವರ್‌ನಲ್ಲಿ ತಂಡ 13 ರನ್ ಕಲೆ ಹಾಕಿತು. ಆದರೆ ಕೊನೆಯ ಐದು ಓವರ್‌ಗಳಲ್ಲಿ 26 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 6ಕ್ಕೆ130 (ಸ್ಮೃತಿ ಮಂದಾನ 11, ಶಫಾಲಿ ವರ್ಮಾ 23, ಹರ್ಲೀನ್ ಡಿಯೋಲ್ 52, ಜೆಮಿಮಾ ರಾಡ್ರಿಗಸ್ 30; ನೊಂಕುಲೆಕೊ ಮಾಬ 28ಕ್ಕೆ1, ಶಬ್ನಿಮ್ ಇಸ್ಮಾಯಿಲ್ 14ಕ್ಕೆ3, ಅನೆಕಿ ಭಾಶ್ 11ಕ್ಕೆ2)
ದಕ್ಷಿಣ ಆಫ್ರಿಕಾ: 19.1 ಓವರ್‌ಗಳಲ್ಲಿ 2ಕ್ಕೆ 133 (ಅನೆಕಿ ಬಾಶ್ ಔಟಾಗದೆ 66, ಸೂನ್ ಲೂಜ್ 43; ಅರುಂಧತಿ ರೆಡ್ಡಿ 20ಕ್ಕೆ1, ಹರ್ಲೀನ್ ಡಿಯೋಲ್ 21ಕ್ಕೆ1). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 8 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.