ADVERTISEMENT

ಮಹಿಳಾ ಏಷ್ಯಾಕಪ್ T20: 8ನೇ ಟ್ರೋಫಿ ಮೇಲೆ ಭಾರತ ಕಣ್ಣು,ಶ್ರೀಲಂಕಾ ವಿರುದ್ಧ ಹಣಾಹಣಿ

ಪಿಟಿಐ
Published 27 ಜುಲೈ 2024, 23:30 IST
Last Updated 27 ಜುಲೈ 2024, 23:30 IST
<div class="paragraphs"><p>ಹರ್ಮನ್‌ ಪ್ರೀತ್‌ ಕೌರ್‌ ಮತ್ತು ರಿಚಾ ಘೋಷ್‌</p></div>

ಹರ್ಮನ್‌ ಪ್ರೀತ್‌ ಕೌರ್‌ ಮತ್ತು ರಿಚಾ ಘೋಷ್‌

   

ದಂಬುಲಾ, ಶ್ರೀಲಂಕಾ: ಹಾಲಿ ಚಾಂಪಿಯನ್ ಭಾರತ ತಂಡ, ಮಹಿಳಾ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಬಾರಿ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮರೆದಿರುವ ಭಾರತ ಅದನ್ನು ಮುಂದುವರಿಸಿ ದಾಖಲೆ ಎಂಟಬೇ ಬಾರಿ ಟ್ರೋಫಿ ಗೆಲ್ಲುವ ಗುರಿಯಲ್ಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದ ಭಾರತ ವನಿತೆಯರು, ನಂತರದ ಪಂದ್ಯಗಳಲ್ಲಿ ಯುಎಇ ವಿರುದ್ಧ 78ರನ್‌ಗಳಿಂದ, ನೇಪಾಳ ವಿರುದ್ಧ 82 ರನ್‌ಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ದ 10 ವಿಕೆಟ್‌ಗಳ ಸುಲಭ ಗೆಲುವು ಪಡೆದಿರುವುದು ತಂಡದ ಮೇಲುಗೈಯನ್ನು ಸೂಚಿಸುತ್ತಿದೆ.

ADVERTISEMENT

ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು 140ರ ಸ್ಟ್ರೈಕ್‌ ರೇಟ್‌ನಲ್ಲಿ 100ಕ್ಕೂ ಹೆಚ್ಚಿನ ರನ್‌ ಗಳಿಸಿದ್ದಾರೆ. ತಂಡಕ್ಕೆ ಬಿರುಸಿನ ಆರಂಭ ನೀಡಿದ್ದಾರೆ. ಹರ್ಮನ್‌ಪ್ರೀತ್ ಒಮ್ಮೆ ಅರ್ಧಶತಕ (66) ದಾಖಲಿಸಿದ್ದಾರೆ.

ಆದರೆ ತಂಡದ ಚಿಂತಕರ ಚಾವಡಿಗೆ ಖುಷಿಕೊಟ್ಟಿರುವುದು ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್‌ ಅವರ ಬೌಲಿಂಗ್‌ ಪ್ರದರ್ಶನ. ದೀಪ್ತಿ ಒಂಬತ್ತು ವಿಕೆಟ್‌ಗಳೊಡನೆ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಏಳು ವಿಕೆಟ್‌ ಉರುಳಿಸಿರುವ ರೇಣುಕಾ ಮೂರನೇ ಸ್ಥಾನದಲ್ಲಿದ್ದಾರೆ. ರಾಧಾ ಯಾದವ್‌ ಆರು ವಿಕೆಟ್‌ ಗಳಿಸಿದ್ದಾರೆ.

ಮತ್ತೊಂದೆಡೆ ಶ್ರೀಲಂಕಾ ಕೂಡಾ ಟೂರ್ನಿಯಲ್ಲಿ ಅಜೇಯವಾಗುಳಿದಿದೆ. ಶ್ರೀಲಂಕಾದ ಆಧಿಪತ್ಯಕ್ಕೆ ನಾಯಕಿ ಚಾಮರಿ ಅಟ್ಟಪಟ್ಟು ಅವರ ಉತ್ತಮ ಫಾರ್ಮ್‌ ಕಾರಣವಾಗಿದೆ. ಅವರು ಈ ಟೂರ್ನಿಯಲ್ಲಿ 243 ರನ್‌ ಗಳಿಸಿ ಯಶಸ್ವಿ ಬ್ಯಾಟರ್ ಎನಿಸಿದ್ದಾರೆ.

ಅಟ್ಟಪಟ್ಟು ಅವರನ್ನು ಬಿಟ್ಟರೆ ತಂಡದ ಇತರ ಬ್ಯಾಟರ್‌ಗಳು ಅಷ್ಟೇನೂ ಯಶಸ್ಸು ಗಳಿಸಿಲ್ಲ. ರಶ್ಮಿ ಗುಣರತ್ನೆ ಅವರು 91ರನ್‌ ಗಳಿಸಿದ್ದು ತಂಡದ ಪರ ಎರಡನೇ ಗರಿಷ್ಠ ಮೊತ್ತವಾಗಿದೆ.

ನೇರ ಪ್ರಸಾರ: ಸಮಯ: ಮಧ್ಯಾಹ್ನ 3ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.