ADVERTISEMENT

Women's Asia Cup | ಫೈನಲ್‌ನತ್ತ ಭಾರತದ ಚಿತ್ತ

ಏಷ್ಯಾ ಕಪ್‌ ಟಿ20: ಸೆಮಿಯಲ್ಲಿ ಇಂದು ಬಾಂಗ್ಲಾ ಜತೆ ಸೆಣಸು

ಪಿಟಿಐ
Published 25 ಜುಲೈ 2024, 23:41 IST
Last Updated 25 ಜುಲೈ 2024, 23:41 IST
ಭಾರತ ತಂಡದ ಬ್ಯಾಟರ್‌ ಸ್ಮೃತಿ ಮಂದಾನ
ಭಾರತ ತಂಡದ ಬ್ಯಾಟರ್‌ ಸ್ಮೃತಿ ಮಂದಾನ   

ದಂಬುಲಾ: ಗುಂಪು ಹಂತದ ಮೂರೂ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ತಂಡದವರು ಮಹಿಳೆಯರ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಬಾಂಗ್ಲಾದೇಶದ ಸವಾಲು ಎದುರಿಸಲಿದ್ದಾರೆ.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಶಫಾಲಿ ವರ್ಮಾ ಅವರಿಂದ ಭಾರತ ತಂಡ ಮತ್ತೊಮ್ಮೆ ಉತ್ತಮ ಆಟ ನಿರೀಕ್ಷಿಸುತ್ತಿದ್ದರೆ, ಸ್ಮೃತಿ ಮಂದಾನ ಅವರು ಈ ಮಹತ್ವದ ಪಂದ್ಯದಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧ 78 ರನ್‌ಗಳಿಂದ ಜಯಿಸಿತ್ತು. ಕೊನೆಯ ಲೀಗ್‌ ಪಂದ್ಯದಲ್ಲಿ ನೇಪಾಳ ತಂಡವನ್ನು 82 ರನ್‌ಗಳಿಂದ ಮಣಿಸಿತ್ತು.

ADVERTISEMENT

ಮೂರು ಪಂದ್ಯಗಳಿಂದ 158 ರನ್‌ ಕಲೆಹಾಕಿರುವ ಶಫಾಲಿ, ಸ್ಪಿನ್ನರ್‌ಗಳನ್ನೇ ನೆಚ್ಚಿಕೊಂಡಿರುವ ಬಾಂಗ್ಲಾ ವಿರುದ್ಧ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಡುವುದು ಅಗತ್ಯ. ಅನುಭವಿ ಆಟಗಾರ್ತಿ ಸ್ಮೃತಿ ಅವರು ಶಫಾಲಿಗೆ ತಕ್ಕ ಸಾಥ್‌ ನೀಡಬೇಕಿದೆ. ಸ್ಮೃತಿ ಅವರು ಪಾಕಿಸ್ತಾನ ವಿರುದ್ಧ 45 ರನ್‌ ಗಳಿಸಿದ್ದರು.

ನಾಯಕಿ ಹರ್ಮನ್‌ಪ್ರೀತ್‌ ಕೌರ್, ರಿಚಾ ಘೋಷ್‌ ಮತ್ತು ಜೆಮಿಮಾ ರಾಡ್ರಿಗಸ್‌ ಅವರು ಮಧ್ಯಮ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ.

ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿರುವ ಬಾಂಗ್ಲಾ ತಂಡವನ್ನು, ಹರ್ಮನ್‌ಪ್ರೀತ್‌ ಬಳಗ ಹಗುರವಾಗಿ ಕಾಣುವಂತಿಲ್ಲ. ತಲಾ ಐದು ವಿಕೆಟ್‌ ಪಡೆದಿರುವ ಎಡಗೈ ಸ್ಪಿನ್ನರ್‌ ನಹೀದಾ ಅಖ್ತರ್‌ ಮತ್ತು ಲೆಗ್‌ಸ್ಪಿನ್ನರ್‌ ರಬಿಯಾ ಖಾನ್‌ ಅವರು ಭಾರತದ ಬಲಿಷ್ಠ ಬ್ಯಾಟಿಂಗ್‌ಗೆ ಸವಾಲಾಗಬಲ್ಲರು.

ಬಾಂಗ್ಲಾದೇಶ ತಂಡ ಪರಿಣಾಮಕಾರಿ ಬ್ಯಾಟರ್‌ಗಳನ್ನು ಹೊಂದಿಲ್ಲ. ಆದ್ದರಿಂದ ಮೊದಲು ಬ್ಯಾಟ್‌ ಮಾಡಿ ಕನಿಷ್ಠ 140ಕ್ಕಿಂತ ಅಧಿಕ ರನ್‌ ಪೇರಿಸಲು ಸಾಧ್ಯವಾದರೂ ಭಾರತಕ್ಕೆ ಎದುರಾಳಿಗಳ ಮೇಲೆ ಒತ್ತಡ ಹೇರಬಹುದು.

ಶ್ರೀಲಂಕಾ–ಪಾಕ್ ಪೈಪೋಟಿ: ಶುಕ್ರವಾರ ರಾತ್ರಿ ನಡೆಯಲಿರುವ ದಿನದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಆತಿಥೇಯ ಶ್ರೀಲಂಕಾ ವಿರುದ್ಧ ಪೈಪೋಟಿ ನಡೆಸಲಿದೆ. 

ಇಂದಿನ ಸೆಮಿ ಪಂದ್ಯಗಳು

ಭಾರತ–ಬಾಂಗ್ಲಾದೇಶ

ಮಧ್ಯಾಹ್ನ 2

ಶ್ರೀಲಂಕಾ–ಪಾಕಿಸ್ತಾನ

ಸಂಜೆ 7

ಲೈವ್: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ ಹಾಟ್‌ಸ್ಟಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.