ಬೆಂಗಳೂರು: ನಾಯಕಿ ವೇದಾ ಕೃಷ್ಣಮೂರ್ತಿ (70; 48ಎ, 9ಬೌಂ, 3ಸಿ) ಅವರ ಸ್ಫೋಟಕ ಆಟದ ಬಲದಿಂದ ಕರ್ನಾಟಕ ತಂಡದವರು ಬಿಸಿಸಿಐ ಸೀನಿಯರ್ ಮಹಿಳಾ ಟ್ವೆಂಟಿ–20 ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಹೈದರಾಬಾದ್ ತಂಡವನ್ನು ಪರಾಭವಗೊಳಿಸಿದ್ದಾರೆ.
ಮುಂಬೈನ ಬಿ.ಕೆ.ಸಿ.ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಮತಾ ಕನೋಜಿಯಾ ಸಾರಥ್ಯದ ಹೈದರಾಬಾದ್ ತಂಡವು ಸಿ.ಪ್ರತ್ಯೂಷಾ (18ಕ್ಕೆ3) ಮತ್ತು ಆಕಾಂಕ್ಷಾ ಕೊಹ್ಲಿ (26ಕ್ಕೆ3) ಅವರ ದಾಳಿಗೆ ತತ್ತರಿಸಿತು. ಈ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 116ರನ್ ಕಲೆಹಾಕಿತು.
ಸಾಧಾರಣ ಗುರಿಯನ್ನು ಕರ್ನಾಟಕ ತಂಡವು 15.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಮುಟ್ಟಿತು.
ಗುರಿ ಬೆನ್ನಟ್ಟಿದ ವೇದಾ ಪಡೆ ಎರಡನೇ ಓವರ್‌ನಲ್ಲೇ ಜಿ.ದಿವ್ಯಾ (9) ಅವರ ವಿಕೆಟ್ ಕಳೆದುಕೊಂಡಿತು. ನಂತರ ಒಂದಾದ ಅನುಭವಿ ಆಟಗಾರ್ತಿ ವಿ.ಆರ್.ವನಿತಾ (ಔಟಾಗದೆ 30; 34ಎ, 3ಬೌಂ) ಮತ್ತು ವೇದಾ, ಹೈದರಾಬಾದ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 96ರನ್ ಸೇರಿಸಿತು.
ಗೆಲುವಿಗೆ 10ರನ್‌ಗಳು ಬೇಕಿದ್ದಾಗ ವೇದಾ ಔಟಾದರು. ನಂತರ ವನಿತಾ ಮತ್ತು ಕೆ.ರಕ್ಷಿತಾ (ಔಟಾಗದೆ 6) ಎಚ್ಚರಿಕೆಯಿಂದ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್: ಹೈದರಾಬಾದ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 116 (ರಮ್ಯಾ 43, ಎಸ್.ಕೆ.ಶ್ರವಂತಿ ನಾಯ್ಡು 12, ಮಮತಾ ಕನೋಜಿಯಾ 10, ಹಿಮಾನಿ ಯಾದವ್ 19, ಅನುರಾಧಾ ನಾಯಕ್ 8; ವಿ.ಚಂದು 16ಕ್ಕೆ1, ಸಿ.ಪ್ರತ್ಯೂಷಾ 18ಕ್ಕೆ3, ಆಕಾಂಕ್ಷಾ ಕೊಹ್ಲಿ 26ಕ್ಕೆ3).
ಕರ್ನಾಟಕ: 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 118 (ಜಿ.ದಿವ್ಯಾ 9, ವಿ.ಆರ್.ವನಿತಾ ಔಟಾಗದೆ 30, ವೇದಾ ಕೃಷ್ಣಮೂರ್ತಿ 70, ಕೆ.ರಕ್ಷಿತಾ ಔಟಾಗದೆ 6; ಭೋಗಿ ಶ್ರಾವಣಿ 29ಕ್ಕೆ1, ಹಿಮಾನಿ ಯಾದವ್ 22ಕ್ಕೆ1).
ಫಲಿತಾಂಶ: ಕರ್ನಾಟಕಕ್ಕೆ 8 ವಿಕೆಟ್ ಗೆಲುವು ಹಾಗೂ ನಾಲ್ಕು ಪಾಯಿಂಟ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.