ADVERTISEMENT

ಮಹಿಳಾ ಕ್ರಿಕೆಟ್‌: ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡಗಳಿಗೆ ಭಾರತ ಆತಿಥ್ಯ

ಪಿಟಿಐ
Published 4 ನವೆಂಬರ್ 2024, 16:10 IST
Last Updated 4 ನವೆಂಬರ್ 2024, 16:10 IST
ಐಸಿಸಿ ಲಾಂಛನ
ಐಸಿಸಿ ಲಾಂಛನ   

ದುಬೈ: ಮುಂದಿನ ನಾಲ್ಕು ವರ್ಷಗಳ (2025–29) ಅವಧಿಗೆ ಮಹಿಳಾ ಕ್ರಿಕೆಟ್‌ನ ಭವಿಷ್ಯದ ಪ್ರವಾಸ ಕಾರ್ಯಕ್ರಮಗಳನ್ನು (ಎಫ್‌ಟಿಪಿ) ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಸೋಮವಾರ ಪ್ರಕಟಿಸಿದ್ದು, ಈ ಬಾರಿ ಟೆಸ್ಟ್‌ ಮತ್ತು ದ್ವಿಪಕ್ಷೀಯ ಸರಣಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳಿಗೆ ಸ್ವದೇಶಿ ಸರಣಿಗಳಲ್ಲಿ ಆತಿಥ್ಯ ವಹಿಸಲಿದೆ. ಅದರ ಜೊತೆಗೆ ಬಾಂಗ್ಲಾದೇಶ ಮತ್ತು 11ನೇ ಸದಸ್ಯ ರಾಷ್ಟ್ರವಾದ ಜಿಂಬಾಬ್ವೆ ತಂಡಗಳನ್ನೂ ತವರಿನಲ್ಲಿ ಎದುರಿಸಲಿದೆ.

ಪ್ರತಿ ಸದಸ್ಯ ರಾಷ್ಟ್ರಗಳಿಗೆ ತಲಾ ನಾಲ್ಕು ಸ್ವದೇಶಿ ಮತ್ತು ವಿದೇಶಿ ಸರಣಿಗಳನ್ನು ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ಭಾರತ ವನಿತೆಯರ ತಂಡವು ನ್ಯೂಜಿಲೆಂಡ್‌, ವೆಸ್ಟ್‌ಇಂಡೀಸ್‌, ಐರ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾಕ್ಕೂ ಪ್ರಯಾಣ ಬೆಳೆಸಲಿದೆ.

ADVERTISEMENT

ಇದಲ್ಲದೆ, ಭಾರತವು 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಇಂಗ್ಲೆಂಡ್‌ನಲ್ಲಿ ತ್ರಿಕೋನ ಸರಣಿಯಲ್ಲಿ ಭಾಗವಹಿಸಲಿದೆ. ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಸರಣಿಯಲ್ಲಿ ಭಾಗವಹಿಸುವ ಮೂರನೇ ತಂಡವಾಗಿದೆ. 2026ರ ಮಹಿಳಾ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ.

‘ಐಸಿಸಿ ಸದಸ್ಯ ರಾಷ್ಟ್ರಗಳು ಈ ಬಾರಿ ಹೆಚ್ಚಿನ ಟೆಸ್ಟ್‌ ಪಂದ್ಯಗಳನ್ನು ಆಡಲು ಒಪ್ಪಿಗೆ ನೀಡಿವೆ. ಏಕದಿನ ಮತ್ತು ಟಿ20 ಒಳಗೊಂಡಿರುವ ಬಹು ಮಾದರಿಯ ಸರಣಿಗಳನ್ನು ಆಡಲು ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಸೇರಿದಂತೆ ಎಲ್ಲ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ’ ಎಂದು ಐಸಿಸಿಯ ಕ್ರಿಕೆಟ್ ಜನರಲ್ ಮ್ಯಾನೇಜರ್ ವಾಸಿಮ್ ಖಾನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025-29ರ ಚಕ್ರವು 2029ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಲೈನ್‌ಅಪ್ ರೂಪಿಸಲು ಹೊಂದಿಸಲಾಗಿದೆ. ಜಿಂಬಾಬ್ವೆ ತಂಡವು ಪೂರ್ಣ ಸದಸ್ಯತ್ವ ಪಡೆದಿರುವುದರಿಂದ ಟೂರ್ನಿಯಲ್ಲಿ ಒಟ್ಟು 11 ತಂಡಗಳು ಸ್ಪರ್ಧಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.