ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ: ಆರ್‌ಸಿಬಿಗೆ ರೋಚಕ ಜಯ

ಆಶಾ ಶೋಭನಾಗೆ ಐದು ವಿಕೆಟ್ ಗೊಂಚಲು; ರಿಚಾ, ಮೇಘನಾ ಅರ್ಧಶತಕ

ಗಿರೀಶದೊಡ್ಡಮನಿ
Published 24 ಫೆಬ್ರುವರಿ 2024, 18:39 IST
Last Updated 24 ಫೆಬ್ರುವರಿ 2024, 18:39 IST
ಆರ್‌ಸಿಬಿ ತಂಡದ ಆಟಗಾರ್ತಿ ರೀಚಾ ಘೋಷ್ ಅವರ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ರಂಜು ಪಿ
ಆರ್‌ಸಿಬಿ ತಂಡದ ಆಟಗಾರ್ತಿ ರೀಚಾ ಘೋಷ್ ಅವರ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ರಂಜು ಪಿ   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಸೇರಿದ್ದ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕ್ರಿಕೆಟ್‌ಪ್ರೇಮಿಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರಾಶೆಗೊಳಿಸಲಿಲ್ಲ.

ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸ್ಮೃತಿ ಮಂದಾನ ಬಳಗವು ಯುಪಿ ವಾರಿಯರ್ಸ್ ಎದುರು 2 ರನ್‌ಗಳ ರೋಚಕ ಜಯ ಸಾಧಿಸಿತು. 158 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಯುಪಿ ತಂಡವನ್ನು ಬೆಂಗಳೂರು ತಂಡದ ಸ್ಪಿನ್ನರ್ ಶೋಭನಾ ಆಶಾ (4–0–22–5) ಕಟ್ಟಿಹಾಕಿದರು.

ಕೊನೆಯ ಎಸೆತದವರೆಗೂ ಪಂದ್ಯವು ಕುತೂಹಲ ಕೆರಳಿಸಿತ್ತು. ಕಟ್ಟಕಡೆಯ ಎಸೆತದಲ್ಲಿ ಐದು ರನ್‌ ಅಗತ್ಯವಿದ್ದಾಗ ಯಪಿ ತಂಡದ ದೀಪ್ತಿ ಶರ್ಮಾ ಕ್ರೀಸ್‌ನಲ್ಲಿದ್ದರು. ಆದರೆ ಅವರಿಗೆ ಸೋಫಿ ಮೆಲೆನಿಕ್ಸ್ ಅವರ ಎಸೆತದಲ್ಲಿ ಸಿಕ್ಸರ್‌ ಹೊಡೆಯಲು ದೀಪ್ತಿಗೆ ಸಾಧ್ಯವಾಗಲಿಲ್ಲ.

ADVERTISEMENT

ಯುಪಿ ತಂಡದ ವೃಂದಾ ದಿನೇಶ್, ತಹಲಿಯಾ ಮೆಕ್‌ಗ್ರಾ, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್ ಮತ್ತು ಕಿರಣ್ ನವಗಿರೆ ಅವರ ವಿಕೆಟ್‌ಗಳನ್ನು ಶೋಭನಾ ಕಬಳಿಸಿದರು. ಅದರಲ್ಲೂ ಅವರು ಒಂಬತ್ತನೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸಿದ್ದು ಆರ್‌ಸಿಬಿ ಗೆಲುವಿನತ್ತ ಸಾಗಲು ಪ್ರಮುಖ ತಿರುವಾಯಿತು.

ಆದರೂ ಕೊನೆಯ ಎರಡು ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡದೇ ಉತ್ತಮ ಬೌಲಿಂಗ್ ಮಾಡಿದ ಸೋಫಿ ಮಾಲಿನೆಕ್ಸ್ ಮತ್ತು ವೆರ್ಹಾಮ್ಸ್ ಅವರೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೇಘನಾ–ರಿಚಾ ಜೊತೆಯಾಟ

ಟಾಸ್ ಗೆದ್ದ ಯುಪಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆದರೆ ಸಬಿನೇನಿ ಮೇಘನಾ (53; 44ಎ, 4X7, 6X1) ಮತ್ತು ರಿಚಾ ಘೋಷ್ (62; 37ಎ, 4X12) ಅವರ ಅರ್ಧಶತಕಗಳಿಂದಾಗಿ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 157 ರನ್‌ ಗಳಿಸಿತು.

54 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ತಂಡಕ್ಕೆ ಮೇಘನಾ ಹಾಗೂ ರಿಚಾ ಆಸರೆಯಾದರು. ದೀಪ್ತಿ ಶರ್ಮಾ ಹಾಕಿದ್ದ ಏಳನೇ ಓವರ್‌ನಲ್ಲಿ ಮೇಘನಾ ಅವರಿಗೆ ಲಭಿಸಿದ್ದ ಜೀವದಾನ ಯುಪಿ ತಂಡಕ್ಕೆ ದುಬಾರಿಯಾಯಿತು. ಮೇಘನಾ ಮತ್ತು ರಿಚಾ ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿದರು. ಮೇಘನಾ 40 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ರಿಚಾ 50ರ ಗಡಿ ಮಟ್ಟಲು 31 ಎಸೆತ ಆಡಿದರು.

ರಿಚಾ ಅವರು ಸಯಾಮಾ ಹಾಕಿದ 14ನೇ ಓವರ್‌ ಮತ್ತು ತಹಲಿಯಾ ಹಾಕಿದ 18ನೇ ಓವರ್‌ನಲ್ಲಿ ‘ಬೌಂಡರಿ ಹ್ಯಾಟ್ರಿಕ್’ ಸಾಧಿಸಿದರು.

ಸಂಕ್ಷಿಪ್ತ ಸ್ಕೋರು: ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 157 (ಸ್ಮೃತಿ ಮಂದಾನ ಎಸ್.ಮೇಘನಾ 53, ರಿಚಾ ಘೋಷ್ 62, ರಾಜೇಶ್ವರಿ ಗಾಯಕವಾಡ 24ಕ್ಕೆ2) ಯುಪಿ ವಾರಿಯರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 155 (ವೃಂದಾ ದಿನೇಶ್ 18, ತಹಲಿಯಾ ಮೆಕ್‌ಗ್ರಾ 22, ಗ್ರೇಸ್ ಹ್ಯಾರಿಸ್ 38, ಶ್ವೇತಾ ಸೆಹ್ರಾವತ್ 31, ಪೂನಂ ಖೆಮ್ನರ್ 14, ದೀಪ್ತಿ ಶರ್ಮಾ ಔಟಾಗದೆ 13, ಶೋಭನಾ ಆಶಾ 22ಕ್ಕೆ5, ಸೋಫಿ ಮಾಲಿನಕ್ಸ್ 36ಕ್ಕೆ1, ಜಾರ್ಜಿಯಾ ವೆರ್ಹಾಮ್ 23ಕ್ಕೆ1) ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2 ರನ್ ಜಯ. ಪಂದ್ಯಶ್ರೇಷ್ಠ:

ಆರ್‌ಸಿಬಿ ತಂಡದ ಆಟಗಾರ್ತಿ ಎಸ್. ಮೇಘನಾ ಅವರ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ರಂಜು ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.