ದುಬೈ: ಆಸ್ಟ್ರೇಲಿಯಾ ತಂಡ, ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮಹಿಳೆಯರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಹಾಲಿ ವಿಶ್ವಕಪ್‌ನಲ್ಲಿ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ವನಿತೆಯರು ಅಭೂತಪೂರ್ವ ಎಂಟನೇ ಬಾರಿ ಫೈನಲ್ ತಲುಪುವ ಯತ್ನದಲ್ಲಿದ್ದಾರೆ.
2009 ರಲ್ಲಿ ಆರಂಭವಾಗಿ ಇದುವರೆಗೆ ನಡೆದಿರುವ ಒಂಬತ್ತು ವಿಶ್ವಕಪ್‌ಗಳಲ್ಲೂ ಆಸ್ಟ್ರೇಲಿಯಾ ಅಂತಿಮ ನಾಲ್ಕರ ಘಟ್ಟ ತಲುಪಿದೆ. ಇದರಲ್ಲಿ ಆರು ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಇವೆರಡು ತಂಡಗಳು ಫೈನಲ್ ತಲುಪಿದ್ದು, ಆಸ್ಟ್ರೇಲಯಾ 19 ರನ್‌ಗಳಿಂದ ಜಯಗಳಿಸಿತ್ತು.
ಇದುವರೆಗಿನ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಆಸ್ಟ್ರೇಲಿಯಾಕ್ಕೆ, ಹರಿಣಗಳ ಪಡೆ ಸಾಟಿಯೇ ಆಗಿಲ್ಲ.
ಒಟ್ಟಾರೆ ಇವೆರಡು ತಂಡಗಳ ನಡುವೆ ಮಹಿಳೆಯರ ಟಿ20 ಪಂದ್ಯಗಳ 10 ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ಒಂಬತ್ತರಲ್ಲಿ ಜಯಗಳಿಸಿದೆ. ದಕ್ಷಿಣ ಆಫ್ರಿಕಾದ ಏಕೈಕ ವಿಜಯ ಈ ವರ್ಷದ ಜನವರಿಯಲ್ಲಿ ದಾಖಲಾಗಿತ್ತು.
ಇನ್ನು ಟಿ20 ವಿಶ್ವಕಪ್‌ನಲ್ಲಂತೂ ಏಳು ಬಾರಿ ಎದುರಾದಾಗಲೂ ಆಸ್ಟ್ರೇಲಿಯಾ ತಂಡವೇ ವಿಜಯಿಯಾಗಿದೆ. ಆಸ್ಟ್ರೇಲಿಯಾ ತಂಡ ಅನುಭವಿಗಳಿಂದ ಕೂಡಿದ್ದು, ಈ ಹಿಂದಿನ ತಂಡದಿಂದ ಮೆಗ್ ಲ್ಯಾನಿಂಗ್ ಮಾತ್ರ ನಿವೃತ್ತಿ ಪಡೆದಿದ್ದಾರೆ. ಉಳಿದ 10 ಮಂದಿ ಹಾಲಿ ತಂಡದಲ್ಲಿದ್ದಾರೆ. ಅಲಿಸಾ ಹೀಲಿ, ಬೆತ್ ಮೂನಿ, ಎಲಿಸ್ ಪೆರ್ರಿ, ಮೇಗನ್ ಶೂಟ್, ಆ್ಯಶ್ಲೆ ಗಾರ್ಡನರ್ ತಂಡದ ಆಧಾರಸ್ಥಂಭಗಳಾಗಿದ್ದಾರೆ.
ಬ್ಯಾಟಿಂಗ್ ಆಳ ಆಸ್ಟ್ರೇಲಿಯಾ ತಂಡದ ಸಾಮರ್ಥ್ಯ. ಇದು ನಿಧಾನಗತಿಯ ದುಬೈ ಟ್ರ್ಯಾಕ್‌ನಲ್ಲಿ ಆ ತಂಡಕ್ಕೆ ನೆರವಾಗಬಲ್ಲ ಅಂಶ. ಫೋಬಿ ಲಿಚ್‌ಫೀಲ್ಡ್ ಮತ್ತು ಅನ್ನಾಬೆಲ್ ಸುದರ್‌ಲ್ಯಾಂಡ್ ಯಾವುದೇ ದಾಳಿಯನ್ನು ಹೊಡೆದಟ್ಟಬಲ್ಲ ಸಮರ್ಥರು.
ದಕ್ಷಿಣ ಆಫ್ರಿಕ ತಂಡದ ಪ್ರಮುಖ ಅಸ್ತ್ರವೆಂದರೆ ಎಡಗೈ ಸ್ಪಿನ್ನರ್ ನೊನ್‌ಕುಲುಲೆಕೊ ಮ್ಲಾಬಾ. ಅವರು ಗುಂಪು ಹಂತದ ನಾಲ್ಕು ಪಂದ್ಯಗಳಲ್ಲಿ 10 ವಿಕೆಟ್ ಬಾಚಿಕೊಂಡಿದ್ದಾರೆ.
ನಾಯಕಿ ಲಾರಾ ವೊಲ್ವಾರ್ಟ್, ಅವರ ಆರಂಭಿಕ ಜೊತೆಗಾತಿ ತಾಝ್ನಿಮ್ ಬ್ರಿಟ್ಸ್ ಮತ್ತು ಅನುಭವಿ ಮರಿಝಾನ್ ಕಾಪ್ ಮಿಂಚಿದರೆ ಉತ್ತಮ ಹೋರಾಟ ಕಂಡುಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.