ADVERTISEMENT

ಮಹಿಳೆಯರ ಟಿ20 ವಿಶ್ವಕಪ್‌ | ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೆ ದಕ್ಷಿಣ ಆಫ್ರಿಕಾ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 23:05 IST
Last Updated 17 ಅಕ್ಟೋಬರ್ 2024, 23:05 IST
<div class="paragraphs"><p>ಮಹಿಳೆಯರ ಟಿ20 ವಿಶ್ವಕಪ್‌</p></div>

ಮಹಿಳೆಯರ ಟಿ20 ವಿಶ್ವಕಪ್‌

   

ದುಬೈ: ಆ್ಯನೆಕಿ ಬಾಷ್‌ ಅವರ ಬಿರುಸಿನ ಅಜೇಯ 74 ರನ್‌ಗಳ (48ಎ, 4x8, 6x1) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಗುರುವಾರ ಎಂಟು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಮಹಿಳೆಯರ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟಿತು. ಸತತ ಎರಡನೇ ಬಾರಿ ಹರಿಣಗಳ ತಂಡ ಫೈನಲ್‌ ತಲುಪಿತು.

ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಆಸ್ಟ್ರೇಲಿಯಾ ತಂಡವನ್ನು, ದಕ್ಷಿಣ ಆಫ್ರಿಕಾ ಬೌಲರ್‌ಗಳು  5 ವಿಕೆಟ್‌ಗೆ 134 ರನ್‌ಗಳಿಗೆ ನಿಯಂತ್ರಿಸಿದರು. ಉತ್ತರವಾಗಿ ದಕ್ಷಿಣ ಆಫ್ರಿಕಾ ಇನ್ನೂ 16 ಎಸೆತಗಳಿರುವಂತೆ ನಿರಿಕ್ಷೆಗಿಂತ ಸುಲಭವಾಗಿ (2 ವಿಕೆಟ್‌ಗೆ 135) ಗುರಿತಲುಪಿತು.

ADVERTISEMENT

ತಾಜ್ಮಿನ್ ಬ್ರಿಟ್ಸ್‌ (15) ನಿರ್ಗಮನದ ನಂತರ, ಆರಂಭ ಆಟಗಾರ್ತಿ ಲಾರಾ ವೊಲ್ವಾರ್ಟ್‌ (42, 37ಎ, 4x3, 6x1) ಜೊತೆಗೂಡಿದ ಆ್ಯನೆಕಿ ಎರಡನೆ ವಿಕೆಟ್‌ಗೆ 96 ರನ್ (65 ಎಸೆತ) ಸೇರಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು.

ಇದಕ್ಕೆ ಮೊದಲು, ಅಯಾಬೊಂಗ ಖಾಕಾ (24ಕ್ಕೆ2) ನೇತೃತ್ವದಲ್ಲಿ ಶಿಸ್ತುಬದ್ಧ ದಾಳಿ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ ಬೌಲರ್‌ಗಳು ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಿದ್ದರು. ಬೆತ್‌ ಮೂನಿ (44, 42ಎ, 4x2) ಮತ್ತು ಪ್ರಭಾರಿ ನಾಯಕಿ ತಹ್ಲಿಯಾ ಮೆಕ್‌ಗ್ರಾತ್‌ (27, 32ಎ) ಅವರು ಮೂರನೇ ವಿಕೆಟ್‌ಗೆ 55 ಎಸೆತಗಳಲ್ಲಿ 50 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು.

ತಹ್ಲಿಯಾ ನಿರ್ಗಮನದ ನಂತರ ಎಲಿಸ್‌ ಪೆರಿ (31, 23ಎ) ರನ್‌ ವೇಗ ಸ್ವಲ್ಪ ಹೆಚ್ಚಿಸಿದರು.

ಸ್ಕೋರುಗಳು: ಆಸ್ಟ್ರೇಲಿಯಾ: 20 ಓವರುಗಳಲ್ಲಿ 5 ವಿಕೆಟ್‌ಗೆ 134 (ಬೆತ್‌ ಮೂನಿ 44, ತಹ್ಲಿಯಾ ಮೆಕ್‌ಗ್ರಾತ್‌ 27, ಎಲಿಸ್‌ ಪೆರಿ 31, ಫೋಬಿ ಲಿಚ್‌ಫೀಲ್ಡ್‌ ಔಟಾಗದೇ 16; ಅಯಾಬೊಂಗ ಖಾಕಾ 24ಕ್ಕೆ2); ದಕ್ಷಿಣ ಆಫ್ರಿಕಾ: 17.2 ಓವರುಗಳಲ್ಲಿ 2 ವಿಕೆಟ್‌ಗೆ 135 (ಲಾರಾ ವೋಲ್ವಾರ್ಟ್‌ 42, ಆ್ಯನೆಕಿ ಬಾಷ್‌ ಔಟಾಗದೇ 74; ಅನ್ನಾಬೆಲ್ ಸದರ್‌ಲ್ಯಾಂಡ್‌ 26ಕ್ಕೆ2). ಪಂದ್ಯದ ಆಟಗಾರ್ತಿ: ಆ್ಯನೆಕಿ ಬಾಷ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.