ADVERTISEMENT

women's T20 WC: ಸೋಫಿ ಡಿವೈನ್ ಮಿಂಚಿನ ಬ್ಯಾಟಿಂಗ್; ಭಾರತಕ್ಕೆ161 ರನ್‌ ಗುರಿ

ಭಾರತ ತಂಡಕ್ಕೆ ಕಠಿಣ ಸವಾಲೊಡ್ಡಿದ ನ್ಯೂಜಿಲೆಂಡ್

ಪಿಟಿಐ
Published 4 ಅಕ್ಟೋಬರ್ 2024, 16:30 IST
Last Updated 4 ಅಕ್ಟೋಬರ್ 2024, 16:30 IST
ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್  –ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್  –ಎಎಫ್‌ಪಿ ಚಿತ್ರ   

ದುಬೈ: ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್ ಅವರ ಬೀಸಾಟದ ಮುಂದೆ ಭಾರತದ ಬೌಲರ್‌ಗಳು ಬಸವಳಿದರು. 

ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೋಫಿ (ಔಟಾಗದೆ 57; 36ಎ) ಅವರ ಮಿಂಚಿನ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 160 ರನ್‌ ಗಳಿಸಿತು. 

ಟಾಸ್ ಗೆದ್ದ ಕಿವೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಸೂಜಿ ಬೇಟ್ಸ್‌ (27; 24ಎ) ಮತ್ತು ಜಾರ್ಜಿಯಾ ಪಿಮರ್ (34; 23ಎ) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 67 ರನ್‌ ಸೇರಿಸಿದರು. ಆರನೇ ಓವರ್‌ನಲ್ಲಿ ಬೇಟ್ಸ್‌ ಕ್ಯಾಚ್ ಕೈಚೆಲ್ಲಿದ ರಿಚಾ ಘೋಷ್ ‘ಜೀವದಾನ’ ನೀಡಿದರು. ಆದರೆ  ಅರುಂಧತಿ ರೆಡ್ಡಿ ಅವರು  ಹಾಕಿದ ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಸೂಜಿ ಕ್ಯಾಚ್‌ ಪಡೆಯುವಲ್ಲಿ ಶ್ರೇಯಾಂಕಾ ಪಾಟೀಲ ಯಶಸ್ವಿಯಾದರು. ನಂತರದ ಓವರ್‌ನಲ್ಲಿ ಜಾರ್ಜಿಯಾ ಅವರಿಗೆ ಆಶಾ ಶೋಭನಾ ಅವರು ಪೆವಿಲಿಯನ್ ದಾರಿ ತೋರಿಸಿದರು. 

ADVERTISEMENT

ಅಮೆಲಿಯಾ ಕೆರ್(13 ರನ್) ಅವರನ್ನು ರೇಣುಕಾ ಯಾದವ್ ಔಟ್ ಮಾಡಿದರು. ಆಗ ಕಿವೀಸ್ ತಂಡದ ಮೊತ್ತ ಇನ್ನೂ ಮೂರಂಕಿಯನ್ನೂ ಮುಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಇನಿಂಗ್ಸ್ ಮೇಲೆ ಹಿಡಿತ ಸಾಧಿಸುವ ಭಾರತದ ಬೌಲರ್‌ಗಳ ಯೋಜನೆಯನ್ನು ಸೋಫಿ ವಿಫಲಗೊಳಿಸಿದರು. ತಂಡದ ಪ್ರಮುಖ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ (4–0–45–0) ಮತ್ತು ಶ್ರೇಯಾಂಕಾ (3–0–25–0) ಅವರನ್ನು ಹೆಚ್ಚು ದಂಡಿಸಿದರು. ಅವರ ಆಟದಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 60 ರನ್‌ಗಳು ತಂಡದ ಖಾತೆ ಸೇರಿದವು. ಬ್ರೂಕಿ ಹಾಲಿಡೇ (16 ರನ್) ಮತ್ತು (ಔಟಾಗದೆ 5) ಕಾಣಿಕೆ ನೀಡಿದರು. 

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 160 (ಸೂಜಿ ಬೇಟ್ಸ್‌ 27, ಜಾರ್ಜಿಯಾ ಪಿಮರ್ 34, ಸೋಫಿ ಡಿವೈನ್ ಔಟಾಗದೆ 57, ರೇಣುಕಾ ಠಾಕೂರ್ ಸಿಂಗ್ 27ಕ್ಕೆ2, ಅರುಂಧತಿ ರೆಡ್ಡಿ 28ಕ್ಕೆ1, ಆಶಾ ಶೋಭನಾ 22ಕ್ಕೆ1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.