ADVERTISEMENT

ಶ್ರೀಲಂಕಾ ಎದುರು ಟಿ20 ಕ್ರಿಕೆಟ್ ಸರಣಿ: ಸೂರ್ಯ–ಗಂಭೀರ್ ಜೋಡಿಗೆ ಮೊದಲ ಸವಾಲು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 19:30 IST
Last Updated 26 ಜುಲೈ 2024, 19:30 IST
<div class="paragraphs"><p>ಶ್ರೀಲಂಕಾ ತಂಡದ ನಾಯಕ ಚರಿತ ಅಸಲಂಕಾ ಮತ್ತು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಟ್ರೋಫಿಯೊಂದಿಗೆ&nbsp; </p></div>

ಶ್ರೀಲಂಕಾ ತಂಡದ ನಾಯಕ ಚರಿತ ಅಸಲಂಕಾ ಮತ್ತು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಟ್ರೋಫಿಯೊಂದಿಗೆ 

   

–ಪಿಟಿಐ ಚಿತ್ರ

ಪೆಲೆಕೆಲೆ: ವಿಶ್ವ ಚಾಂಪಿಯನ್ ಭಾರತ ತಂಡವು ಶನಿವಾರ ಶ್ರೀಲಂಕಾ ತಂಡದ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ADVERTISEMENT

ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಜೋಡಿಗೆ ಇದು ‘ಚೊಚ್ಚಲ’ ಸರಣಿಯಾಗಿದೆ. ಮೂರು ಟಿ20 ಪಂದ್ಯಗಳು ಈ ಸರಣಿಯಲ್ಲಿ ನಡೆಯಲಿದೆ.

ಎರಡು ಬಾರಿ ವಿಶ್ವ ಚಾಂಪಿಯನ್ ಗಂಭೀರ್ ಅವರು ಈಚೆಗೆ ಐಪಿಎಲ್‌ನಲ್ಲಿ ಮೆಂಟರ್ ಆಗಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡವೂ ಚಾಂಪಿಯನ್ ಆಗಿತ್ತು.  ಇದೀಗ ರಾಷ್ಟ್ರೀಯ ತಂಡದ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ.

ಟಿ20 ಮಾದರಿಯ ಉತ್ತಮ ಬ್ಯಾಟರ್‌ ಆಗಿರುವ ಸೂರ್ಯ, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್ ಹಾಗೂ ಶಿವಂ ದುಬೆ ಅವರು ತಂಡದಲ್ಲಿದ್ದಾರೆ. ಆಲ್‌ರೌಂಡರ್ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಅವರ ಬಲವೂ ತಂಡಕ್ಕೆ ಇದೆ. ಸ್ಪಿನ್ನರ್ ರವಿ ಬಿಷ್ಣೋಯಿ, ವೇಗಿ ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ನಾಯಕತ್ವ ವಹಿಸಿದ್ದ ಶುಭಮನ್ ಗಿಲ್ ಇಲ್ಲಿ ಉಪನಾಯಕರಾಗಿದ್ದಾರೆ. ಈ ಹಿಂದೆ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಟಿ20 ಮಾದರಿಯಿಂದ ನಿರ್ಗಮಿಸಿದ್ದಾರೆ.

ಚರಿತ ಅಸಲಂಕಾ ನಾಯಕತ್ವದ  ಶ್ರೀಲಂಕಾ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಇದೆ. ಹಂಗಾಮಿ ಕೋಚ್ ಸನತ್ ಜಯಸೂರ್ಯ ಅವರ ಮುಂದೆ ಈ ತಂಡಕ್ಕೆ ಮಾರ್ಗದರ್ಶನ ನೀಡುವ ಸವಾಲು ಇದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡವು ಕಳಪೆ ಪ್ರದರ್ಶನ ನೀಡಿತ್ತು. ಆದ್ದರಿಂದ ಆಗಿನ ತರಬೇತಿ ಸಲಹೆಗಾರ ಮಹೇಲ ಜಯವರ್ಧನೆ ರಾಜೀನಾಮೆ ನೀಡಿದ್ದರು.  ತವರಿನಂಗಳದಲ್ಲಿ ಗೆಲುವಿನ ಆರಂಭ ಮಾಡುವ ಛಲದಲ್ಲಿ ಲಂಕಾ ತಂಡವಿದೆ.

ಪಂದ್ಯ ಆರಂಭ: ರಾತ್ರಿ 7

ವಿಕೆಟ್‌ಕೀಪರ್‌ ಸಂಖ್ಯೆ ಹೆಚ್ಚಳ: ಕರೀಂ ಸಂತಸ

ಭಾರತ ತಂಡದಲ್ಲಿ ಈಗ ಉತ್ತಮ ವಿಕೆಟ್‌ಕೀಪರ್‌ಗಳ ಸಂಖ್ಯೆ ಹೆಚ್ಚಿದೆ. ಮೊದಲ ವಿಕೆಟ್‌ಕೀಪರ್ ಸ್ಥಾನಕ್ಕಾಗಿ ಪೈಪೋಟಿ ಬಲವಾಗಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಕ್ರಿಕೆಟ್ ವೀಕ್ಷಕ ವಿವರಣೆಕಾರ ಸಬಾ ಕರೀಂ ಹೇಳಿದರು.

ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಇದ್ದಾರೆ. ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಹಾಗೂ  ಕೆ.ಎಲ್. ರಾಹುಲ್ ಸ್ಥಾನ ಗಳಿಸಿದ್ದಾರೆ. ಭಾರತ ತಂಡದ ಮಾಜಿ ವಿಕೆಟ್‌ಕೀಪರ್ ಕೂಡ ಆಗಿರುವ ಕರೀಂ ಈ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಅವರು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

‘ಕ್ರಿಕೆಟ್ ತಂಡದಲ್ಲಿ ವಿಕೆಟ್‌ಕೀಪರ್ ಸ್ಥಾನವು ಮಹತ್ವದ್ದು. ದೇಶದಲ್ಲಿ ಈ ವಿಭಾಗದಲ್ಲಿ ಉತ್ತಮ ಆಟಗಾರರು ಹೊರಹೊಮ್ಮುತ್ತಿರುವುದು  ಆಶಾದಾಯಕ ಬೆಳವಣಿಗೆ. ಶ್ರೀಲಂಕಾ ವಿರುದ್ಧದ ಸರಣಿಯು ಮಹತ್ವದ್ದಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಲ್ಲದ ಟಿ20 ತಂಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಲಭಿಸಿದೆ. ಅವರು ತಮ್ಮ ಸಾಮರ್ಥ್ಯ ಮೆರೆಯಲು ಇದು ಸೂಕ್ತ ಸಮಯ. ಭವಿಷ್ಯದಲ್ಲಿ ಭಾರತ ತಂಡದ ಶಕ್ತಿಯಾಗುವಂತಹ ಆಟಗಾರರು ಇದರಲ್ಲಿದ್ಧಾರೆ’ ಎಂದರು.

‘ಕೆ.ಎಲ್. ರಾಹುಲ್ ಅವರು ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲಿರುವುದು ಸೂಕ್ತವಾಗಿದೆ. ಅವರು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. ಅನುಭವ ಮತ್ತು ಪ್ರತಿಭೆ ಎರಡೂ ಅವರಲ್ಲಿದೆ. ತಂಡದ ಶಕ್ತಿಯಾಗುವ ಆಟಗಾರ ಅವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.