ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಜ್ಜುಗೊಂಡಿದೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ವರ್ಲ್ಡ್ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ 2024' ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತೀಯ ಕಾಲಮಾನ ಇಂದು ರಾತ್ರಿ 9 ಗಂಟೆಗೆ ಸರಿಯಾಗಿ ಆರಂಭವಾಗಲಿದೆ. ಫ್ಯಾನ್‌ಕೋಡ್‌ನಲ್ಲಿ ನೇರಪ್ರಸಾರವಾಗಲಿದೆ.
ಭಾರತ ತಂಡದಲ್ಲಿ ಯಾರೆಲ್ಲ ಇದ್ದಾರೆ ?
ಎರಡು ಬಾರಿಯ ವಿಶ್ವಕಪ್ ವಿಜೇತ ಮಾಜಿ ಆಲ್‌ರೌಂಡ್ ಆಟಗಾರ ಯುವರಾಜ್ ಸಿಂಗ್ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತ ತಂಡದಲ್ಲಿ ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ವಿನಯ್ ಕುಮಾರ್, ಹರಭಜನ್ ಸಿಂಗ್, ಆರ್.ಪಿ ಸಿಂಗ್ ಮುಂತಾದ ಮಾಜಿ ದಿಗ್ಗಜರು ಇದ್ದಾರೆ.
ಅತ್ತ ಪಾಕಿಸ್ತಾನ ತಂಡಕ್ಕೆ ಯೂನಿಸ್ ಖಾನ್ ನಾಯಕರಾಗಿದ್ದಾರೆ. ಕಮ್ರಾನ್ ಅಕ್ಮಲ್, ಶೋಯಬ್ ಮಲಿಕ್, ಶಾಹೀದ್ ಅಫ್ರಿದಿ, ಮಿಸ್ಬಾ ಉಲ್ ಹಕ್, ಸೊಹೈಲ್ ತನ್ವೀರ್, ವಹಾಬ್ ರಿಯಾಜ್, ಅಬ್ದುಲ್ ರಜಾಜ್, ಮೊಹಮ್ಮದ್ ಹಫೀಜ್, ಉಮರ್ ಅಕ್ಮಲ್ ತಂಡದಲ್ಲಿದ್ದಾರೆ.
ಇದರೊಂದಿಗೆ ದಿಗ್ಗಜ ಆಟಗಾರರ ನಡುವೆ ಮಗದೊಂದು ರೋಚಕ ಪಂದ್ಯವನ್ನು ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ.
ಭಾಗವಹಿಸಿದ ತಂಡಗಳು:
ಇಂಡಿಯಾ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್, ಪಾಕಿಸ್ತಾನ ಚಾಂಪಿಯನ್ಸ್, ವೆಸ್ಟ್ ಇಂಡೀಸ್ ಚಾಂಪಿಯನ್ಸ್, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್. ಒಟ್ಟು ಆರು ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಲೀಗ್ ಹಂತದಲ್ಲಿ ಭಾರತ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಮೂರರಲ್ಲಿ ಸೋಲು ಕಂಡಿತ್ತು.
ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವನ್ನು 86 ರನ್‌ಗಳಿಂದ ಮಣಿಸಿದ್ದ ಭಾರತ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿತು. ಮತ್ತೊಂದೆಡೆ ವೆಸ್ಟ್‌ಇಂಡೀಸ್ ಚಾಂಪಿಯನ್ಸ್ ತಂಡವನ್ನು 20 ರನ್‌ಗಳಿಂದ ಮಣಿಸಿದ್ದ ಪಾಕಿಸ್ತಾನ ಫೈನಲ್‌ಗೆ ಪ್ರವೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.