ನವದೆಹಲಿ: ಐಸಿಸಿ ವಿಶ್ವಕಪ್‌ನ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಮಾಡಿದ ಮನವಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಅಧಿಕೃತವಾಗಿ ತಳ್ಳಿಹಾಕಿದೆ.
ಎರಡು ದಿನ ಬೆನ್ನುಬೆನ್ನಿಗೆ ಪಂದ್ಯಗಳನ್ನು ಆಯೋಜಿಸಿದರೆ ಅಗತ್ಯ ಸಂಖ್ಯೆಯಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲು ಅಡ್ಡಿಯಾಗುತ್ತದೆ ಎಂದು ಸ್ಥಳೀಯ ಪೊಲೀಸರು ಆತಂಕ ವ್ಯಕ್ತಪಡಿಸಿದ ಕಾರಣ ಬದಲಾವಣೆಗೆ ಎಚ್‌ಸಿಎ ಮನವಿ ಮಾಡಿತ್ತು.
‘ಆಗಸ್ಟ್ 9ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದು, ಇನ್ನಷ್ಟು ಬದಲಾವಣೆಯನ್ನು ಈ ಹಂತದಲ್ಲಿ ಮಾಡಲಾಗದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಸಭೆಯಲ್ಲಿ ಎಚ್‌ಸಿಎಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಲಾಯಿತು’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಈ ಹಂತದಲ್ಲಿ ಬದಲಾವಣೆ ಕಷ್ಟ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಭಾನುವಾರವೇ ಹೇಳಿದ್ದರು.
ವೇಳಾಪಟ್ಟಿ ಪರಿಷ್ಕೃತಗೊಳಿಸಿದ ಬಳಿಕ ಹೈದರಾಬಾದ್‌ನಲ್ಲಿ ಅ. 11ರಂದು ನಡೆಯಬೇಕಾಗಿದ್ದ ಪಾಕ್–ಲಂಕಾ ಪಂದ್ಯವನ್ನು ಅ. 10ಕ್ಕೆ ಹಿಂದೂಡಲಾಗಿತ್ತು. ಅ. 9ರಂದು ಇದೇ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್– ನ್ಯೂಜಿಲೆಂಡ್ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.