ಭಾರತ ತಂಡದ ಎದುರಿನ ಪಂದ್ಯದಲ್ಲಿ ಸೋಲು ಕಂಡಿದ್ದಕ್ಕೆ ಬೇಸರಗೊಂಡು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಸಿಕ್ಕಾಪಟ್ಟೆ ಟ್ರಾಲ್ ಮಾಡಿದ್ದ ಅಭಿಮಾನಿಗಳು, ಅದೇ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಗೆದ್ದದ್ದಕ್ಕೆ ಸಂಭ್ರಮಾಚರಿಸಿದ್ದಾರೆ. ಮಾತ್ರವಲ್ಲದೆ ಬೇಸರದಲ್ಲಿ ಮಾಡಿದ್ದ ಎಡವಟ್ಟಿಗೆ ಸರ್ಫರಾಜ್ ಅವರಲ್ಲಿ ಕ್ಷಮೆ ಕೋರಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ವಿಶ್ವಕಪ್‌ನಂತಹ ದೊಡ್ಡಮಟ್ಟದ ಪಂದ್ಯಾವಳಿಗಳಲ್ಲಿ ಭಾರತ–ಪಾಕಿಸ್ತಾನ ಪಂದ್ಯವೆಂದರೆ ತೀವ್ರ ಕುತೂಹಲ ಗರಿಗೆದರುತ್ತದೆ. ಆ ಪರಿಯ ಪ್ರಚಾರವೂ ಅದರ ಬೆನ್ನಿಗಿರುತ್ತದೆ. ಪಂದ್ಯದ ಫಲಿತಾಂಶವನ್ನು ಹೆಚ್ಚಿನ ಅಭಿಮಾನಿಗಳೂ ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಎರಡೂ ತಂಡದ ಆಟಗಾರರು ಅಭಿಮಾನಿಗಳ ಅಪಾರ ನಿರೀಕ್ಷೆಯ ಭಾರ ಹೊತ್ತು ಒತ್ತಡದಲ್ಲಿಕಣಕ್ಕಿಳಿಯುವುದು, ಸಾಮರ್ಥ್ಯ ಮೀರಿ ಗೆಲುವಿಗಾಗಿ ಆಡುವುದು ಕಂಡುಬರುತ್ತದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16ರಂದು ಅಂತಹದೇ ಸಂದರ್ಭ ಸೃಷ್ಟಿಯಾಗಿತ್ತು.
ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 89 ರನ್‌ಗಳ ಅಂತರಿಂದ ಪಾಕಿಸ್ತಾನವನ್ನು ಹಣಿದಿತ್ತು. ಇದರಿಂದ ಕೆರಳಿದ್ದ ಪಾಕ್ ತಂಡದ ಅಭಿಮಾನಿಗಳು ಕ್ರೀಡಾಂಗಣದಲ್ಲೇ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ‘ಕೊಬ್ಬಿದವ’ ಎಂದು ಜರಿದಿದ್ದರು. ಮಾತ್ರವಲ್ಲದೆ ಪಾಕಿಸ್ತಾನ ತಂಡದ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ಹಾಗೂ ಟೀಕೆಗಳು ವ್ಯಕ್ತವಾಗಿದ್ದವು.
ಇದರಿಂದ ಬೇಸರಗೊಂಡಿದ್ದವೇಗಿ ಮೊಹಮ್ಮದ್ ಆಮೀರ್‌ಆಟಗಾರರ ವಿರುದ್ಧ ‘ಕೆಟ್ಟ ಬೈಗುಳನ್ನು’ ಪ್ರಯೋಗಿಸಬೇಡಿ ಎಂದೂ ಮನವಿ ಮಾಡಿದ್ದಾರೆ.
ಆದರೆ, ಜೂನ್ 23ರ ಹೊತ್ತಿಗೆ ಅಭಿಮಾನಿಗಳ ಮನಸ್ಥಿತಿಯೇ ಬದಲಾಗಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್‌ಗಳ ಅಂತರದಲ್ಲಿ ಪಾಕ್ ಗೆಲ್ಲುತ್ತಿದ್ದಂತೆ ಹಿಂದಿನ ಸೋಲಿನ ನೋವು ಮರೆತ ಅಭಿಮಾನಿಗಳು ಸಂತಸದಲ್ಲಿ ತೇಲಿದ್ದಾರೆ. ಈ ವೇಳೆ ಪಾಕ್ ತಂಡ ಹಾಗೂ ನಾಯಕನ ಬಗ್ಗೆ ಅವಹೇಳನಕಾರಿಯಾಗಿ ಟ್ರಾಲ್ ಮಾಡಿದ್ದಕ್ಕೆ ‘ಸಾರಿ’ ಎಂದಿದ್ದಾರೆ.
ಅಭಿಮಾನಿಯೊಬ್ಬರುತಂಡದ ಜೆರ್ಸಿ ತೊಟ್ಟು, ‘ಸಾರಿ ಸರ್ಫರಾಜ್’ ಎಂದು ಬರೆದಿರುವ ಪೋಸ್ಟರ್ ಹಿಡಿದುಕೊಂಡಿರುವ ಚಿತ್ರವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಆ ಚಿತ್ರವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ರೀಟ್ವೀಟ್ ಮಾಡಿಕೊಂಡಿದೆ. ಇದಾದ ಬೆನ್ನಲ್ಲೇ ಇನ್ನೂ ಹಲವರ ಖಾತೆಗಳಲ್ಲಿ ‘ಕ್ಷಮಾಪಣೆ’ ಪೋಸ್ಟ್‌ಗಳು ಹಾಗೂ ಅವಹೇಳನ ಮಾಡುವುದು ತಪ್ಪು ಎಂಬರ್ಥದ ಪೋಸ್ಟ್‌ಗಳು ಹರಿದಾಡಿವೆ. ಇನ್ನೂ ಕೆಲವರು ಸೋಲಿನ ಹಿನ್ನಡೆಯಿಂದ ಮೇಲೆದ್ದ ಪಾಕಿಸ್ತಾನದ ಬೆನ್ನು ತಟ್ಟಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಹ್ಯಾರಿಸ್ ಸೋಹೆಲ್(89) ಹಾಗೂ ಬಾಬರ್ ಅಜಂ(69) ಗಳಿಸಿದ ಅರ್ಧಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 308 ರನ್ ಕಲೆಹಾಕಿತ್ತು. ಈ ಮೊತ್ತದ ಬೆನ್ನುಹತ್ತಿದ್ದ ಆಫ್ರಿಕನ್ನರು ನಾಯಕ ಫಾಫ್ ಡುಪ್ಲೆಸಿ(63) ಅರ್ಧಶತಕದ ಹೊರತಾಗಿಯೂ ಕೇವಲ 259ರನ್ ಗಳಿಸಿ ಸೋಲು ಒಪ್ಪಿಕೊಂಡಿತ್ತು.
ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಈವರೆಗೆ 6 ಪಂದ್ಯಗಳನ್ನು ಆಡಿದೆ. ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್, ಭಾರತ ಎದುರು ಸೋಲುಕಂಡಿದ್ದು, ಬಲಿಷ್ಠ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಗೆದ್ದು ಬೀಗಿದೆ. ಶ್ರೀಲಂಕಾ ವಿರುದ್ಧ ನಡೆಯಬೇಕಿದ್ದ ಉಳಿದೊಂದು ಪಂದ್ಯ ಮಳೆಯಿಂದಾಗಿ ರದ್ಧಾಗಿತ್ತು. ಹೀಗಾಗಿ ಖಾತೆಯಲ್ಲಿ ಒಟ್ಟು 5 ಅಂಕಗಳನ್ನು ಹೊಂದಿರುವ ಸರ್ಫರಾಜ್ ಬಳಗ ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.