ADVERTISEMENT

ಸೆಮಿಫೈನಲ್‌ಗೆ ನ್ಯೂಜಿಲೆಂಡ್‌, ಪಾಕಿಸ್ತಾನದ ಕನಸು ಭಗ್ನ; ಭಾರತದ ಎದುರಾಳಿ ಯಾರು?

ವಿಶ್ವಕಪ್ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 16:30 IST
Last Updated 5 ಜುಲೈ 2019, 16:30 IST
   

ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನದ ಸೆಮಿಫೈನಲ್‌ ಕನಸು ಭಗ್ನಗೊಂಡಿದೆ. ಬಾಂಗ್ಲಾ ತಂಡ ಏಳು ರನ್‌ ಗಳಿಸುತ್ತಿದ್ದಂತೆ ಪಾಕಿಸ್ತಾನ ಅಧಿಕೃತವಾಗಿ ಸೆಮಿಫೈನಲ್‌ನಿಂದ ಹೊರಗುಳಿದಿದೆ. ಪಾಯಿಂಟ್‌ ಪಟ್ಟಿಯ ನಾಲ್ಕನೇ ಸ್ಥಾನ ನ್ಯೂಜಿಲೆಂಡ್‌ ಪಾಲಿಗೆ ಗಟ್ಟಿಯಾಗಿದ್ದು, ಸೆಮಿಫೈನಲ್‌ ಪ್ರವೇಶ ಖಚಿತವಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ, ಬಾಬರ್‌ ಮತ್ತು ಇಮಾದ್‌ ಭರ್ಜರಿ ಆಟವಾಡಿದರೂ 500 ರನ್‌ ಬೃಹತ್‌ ಮೊತ್ತ ಪೇರಿಸುವುದು ಅಸಾಧ್ಯವೆನಿಸಿತು. 315 ರನ್‌ ಗಳಿಸಿದ ಪಾಕಿಸ್ತಾನ ಬಾಂಗ್ಲಾ ಹುಲಿಗಳನ್ನು ಕೇವಲ 7 ರನ್‌ ಗಳಿಗೆ ಕಟ್ಟಿ ಹಾಕಿದ್ದರೆ ಸೆಮಿಫೈನಲ್‌ ಪ್ರವೇಶಿಸುವ ಸಣ್ಣ ಅವಕಾಶವೂ ಇತ್ತು! ಇದೀಗ ಪಾಕಿಸ್ತಾನ ಅಧಿಕೃತವಾಗಿ ಸೆಮಿಫೈನಲ್‌ನಿಂದ ದೂರ ಉಳಿದಂತಾಗಿದೆ.

ADVERTISEMENT

ಕ್ಷಣಕ್ಷಣದ ಸ್ಕೋರ್:https://bit.ly/2FS8vJ6

ಈ ಹಿಂದೆಯೇ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳ ಸೆಮಿಫೈನಲ್‌ ಪ್ರವೇಶ ಖಚಿತಗೊಂಡಿದ್ದು, ನಾಲ್ಕನೇ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಪೈಪೋಟಿ ಎದುರಾಗಿತ್ತು. ಟೀಂ ಇಂಡಿಯಾ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಪಾಕಿಸ್ತಾನ ನಾಕ್‌ಔಟ್‌ನಲ್ಲಿ ನಿರ್ಭೀತಿಯಿಂದ ಮುಂದೆ ಸಾಗುವ ಲೆಕ್ಕಾಚಾರ ಹಾಕಿತ್ತು. ಪಾಕ್‌ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಭಾರತ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿ; ಇಂಗ್ಲಿಷರನ್ನು ಮಟ್ಟ ಹಾಕಿ ಎಂದೆಲ್ಲ ಹಾರೈಸಿದ್ದರು. ಭಾರತ ಆ ಪಂದ್ಯದಲ್ಲಿ ಮೊದಲ ಸೋಲು ಕಂಡಿತು.

ಸೆಮಿಫೈನಲ್‌ನಲ್ಲಿ ಭಾರತ ಎದುರು ಯಾರು?

ತಲಾ ಎಂಟು ಪಂದ್ಯಗಳನ್ನು ಆಡಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಶನಿವಾರ ಟೂರ್ನಿಯ ರೌಂಡ್‌ರಾಬಿನ್‌ ಸುತ್ತಿನ ಕೊನೆಯ ಪಂದ್ಯಗಳನ್ನು ಆಡಲಿವೆ. ಶ್ರೀಲಂಕಾ ವಿರುದ್ಧ ಭಾರತ ಗೆಲುವು ಸಾಧಿಸಿ, ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಾ ಸೋತರೆ; ಭಾರತ 15 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನಕ್ಕೇರಲಿದೆ. ಆಸ್ಟ್ರೇಲಿಯಾ ಕೂಡ ಗೆಲುವು ಕಂಡರೆ, ಕಾಂಗರೂ ಪಡೆಯೇ ಮೊದಲ ಸ್ಥಾನದಲ್ಲಿ ಉಳಿಯಲಿದೆ.

ಭಾರತ ಮೊದಲ ಸ್ಥಾನಕ್ಕೆ ಬಂದರೆ, ಜುಲೈ 9ರಂದು(ಮಂಗಳವಾರ) ಮ್ಯಾನ್‌ಚೆಸ್ಟರ್‌ನ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಸೆಣಸಲಿದೆ. ಎರಡನೇ ಸ್ಥಾನದಲ್ಲೇ ಉಳಿದರೆ, ಜುಲೈ 11ರಂದು(ಗುರುವಾರ) ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಹೋರಾಟ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.