ಲಂಡನ್: ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಆಸೆ ಹೊಂದಿರುವ ಪಾಕಿಸ್ತಾನ ತಂಡವು ಈಗ ಪವಾಡದ ನಿರೀಕ್ಷೆಯಲ್ಲಿದೆ.
ಶುಕ್ರವಾರ ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸರ್ಫರಾಜ್ ಅಹಮದ್ ಬಳಗವು ಬಾಂಗ್ಲಾದೇಶದ ಎದುರು ಸೆಣಸಲಿದೆ.
ಭಾರತ ತಂಡವು ಇಂಗ್ಲೆಂಡ್ ಎದುರು ಸೋತ ದಿನವೇ ಪಾಕ್ ತಂಡದ ಸೆಮಿಫೈನಲ್ ಹಾದಿ ದುರ್ಗಮವಾಗಿತ್ತು. ಬುಧವಾರ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಎದುರು ಗೆದ್ದ ನಂತರ ಈ ದಾರಿ ಬಹುತೇಕ ಮುಚ್ಚಿದೆ.
ನಾಲ್ಕರ ಘಟ್ಟ ಪ್ರವೇಶಿಸುವ ಸಣ್ಣ ಅವಕಾಶ ಪಾಕಿಸ್ತಾನಕ್ಕಿದೆ. ಇದಕ್ಕಾಗಿ ತಂಡವು ಬಾಂಗ್ಲಾ ಎದುರು ಮೊದಲು ಬ್ಯಾಟ್ ಮಾಡಿ ದೊಡ್ಡ ಅಂತರದಿಂದ ಗೆಲ್ಲಬೇಕು. ಒಂದೊಮ್ಮೆ ಟಾಸ್ ಸೋತು ಮೊದಲು ಫೀಲ್ಡಿಂಗ್ ಮಾಡುವಂತಾದರೆ ಪಂದ್ಯಕ್ಕೂ ಮುನ್ನವೇ ಸರ್ಫರಾಜ್ ಬಳಗದ ಸೆಮಿ ಕನಸು ಭಗ್ನಗೊಳ್ಳಲಿದ್ದು, ತಂಡವು ಗೆಲುವಿನೊಂದಿಗೆ ಅಭಿಯಾನ ಮುಗಿಸಲಷ್ಟೇ ಹೋರಾಡಬೇಕಾಗುತ್ತದೆ.
ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ಎದುರಿನ ಸೋಲಿನ ನಂತರ ಪಾಕ್ ತಂಡವು ಪುಟಿದೆದ್ದಿತ್ತು. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಅಫ್ಗಾನಿಸ್ತಾನ ತಂಡಗಳನ್ನು ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿತ್ತು.
ಬಾಬರ್ ಅಜಂ ಮತ್ತು ಹ್ಯಾರಿಸ್ ಸೋಹೆಲ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಅಮೋಘ ಲಯದಲ್ಲಿರುವ ಇವರು ಬಾಂಗ್ಲಾ ಎದುರೂ ಸ್ಫೋಟಕ ಆಟ ಆಡುವ ಉತ್ಸಾಹದಲ್ಲಿದ್ದಾರೆ. ಫಖರ್ ಜಮಾನ್ ಕೂಡಾ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಅನುಭವಿಗಳಾದ ಸರ್ಫರಾಜ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್ ಅವರ ವೈಫಲ್ಯ ತಂಡಕ್ಕೆ ಮುಳುವಾಗಿ ಪರಿಣಮಿಸುತ್ತಿದೆ. ಇವರು ಬಾಂಗ್ಲಾ ಎದುರು ಲಯ ಕಂಡುಕೊಳ್ಳಲೇಬೇಕು.
ಶಾದಬ್ ಖಾನ್, ಇಮಾಮ್ ಉಲ್ ಹಕ್ ಮತ್ತು ಇಮಾದ್ ವಾಸೀಂ ಕೂಡಾ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಬೇಕು. ಹಾಗಾದಲ್ಲಿ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ಅಂಗಳದಲ್ಲಿ ರನ್ ಮಳೆ ಸುರಿಯಬಹುದು.
ಬೌಲಿಂಗ್‌ನಲ್ಲಿ ಪಾಕ್ ತಂಡವು ಬಲಿಷ್ಠವಾಗಿದೆ. ಮೊಹಮ್ಮದ್ ಅಮೀರ್, ಶಾಹೀನ್ ಶಾ ಅಫ್ರಿದಿ ಮತ್ತು ವಹಾಬ್ ರಿಯಾಜ್ ಅವರು ಶರವೇಗದ ಎಸೆತಗಳ ಮೂಲಕ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸಬಲ್ಲರು.
ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿರುವ ಬಾಂಗ್ಲಾ ತಂಡವು ಗೆಲುವಿನೊಂದಿಗೆ ಅಭಿಯಾನ ಮುಗಿಸುವ ವಿಶ್ವಾಸದಲ್ಲಿದೆ. ಈ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಮಣಿಸಿ ಭರವಸೆ ಮೂಡಿಸಿದೆ.
ಶಕೀಬ್ ಅಲ್ ಹಸನ್ ಈ ತಂಡದ ಆಧಾರಸ್ಥಂಭವಾಗಿದ್ದಾರೆ. ಟೂರ್ನಿಯಲ್ಲಿ ಅವರು ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದಾರೆ. ವಿಶ್ವಕಪ್ ಟೂರ್ನಿಯೊಂದರಲ್ಲಿ 500ಕ್ಕಿಂತಲೂ ಅಧಿಕ ರನ್ ಗಳಿಸಿ, 10 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ.
ಈ ತಂಡದ ಬೌಲಿಂಗ್ ಅಷ್ಟು ಮೊನಚಾಗಿಲ್ಲ. ಈ ವಿಭಾಗದಲ್ಲಿ ತಂಡ ಪರಿಣಾಮಕಾರಿ ಸಾಮರ್ಥ್ಯ ತೋರಿದರೆ ಪಾಕ್‌ಗೆ ಸೋಲುಣಿಸುವುದು ಕಷ್ಟವಾಗಲಾರದು.
ಪಾಕ್ ತಂಡದ ಸೆಮಿ ಲೆಕ್ಕಾಚಾರ ಹೀಗೆ..
ಪಾಕಿಸ್ತಾನವು ಮೊದಲು ಬ್ಯಾಟ್ ಮಾಡಿ 350ರನ್ ಗಳಿಸಿದ್ದೇ ಆದಲ್ಲಿ 311ರನ್‌ಗಳ ಅಂತರದಿಂದ ಬಾಂಗ್ಲಾ ತಂಡವನ್ನು ಮಣಿಸಬೇಕು.
ಒಂದೊಮ್ಮೆ 400ರನ್ ಕಲೆಹಾಕಿದರೆ, ಆಗ ‘ಬಾಂಗ್ಲಾ ಹುಲಿ’ಗಳನ್ನು 84ರನ್‌ಗಳಿಗೆ ಆಲೌಟ್ ಮಾಡಬೇಕು. ಹಾಗಾದಲ್ಲಿ ತಂಡವು 316ರನ್‌ಗಳಿಂದ ಗೆದ್ದಂತಾಗುತ್ತದೆ. ಆಗ ರನ್‌ರೇಟ್ ಹೆಚ್ಚುತ್ತದೆ. ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಇಷ್ಟು ರನ್ ಅಂತರದಿಂದ ಗೆದ್ದ ಉದಾಹರಣೆಯೇ ಇಲ್ಲ.
ಸದ್ಯ ನ್ಯೂಜಿಲೆಂಡ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡ ಹಿಂದಿನ ಎರಡು ಪಂದ್ಯಗಳಲ್ಲೂ ದೊಡ್ಡ ಅಂತರದಿಂದ ಸೋತಿದೆ. ಹೀಗಿದ್ದರೂ 11 ಪಾಯಿಂಟ್ಸ್ ಗಳಿಸಿರುವ ಕೇನ್ ವಿಲಿಯಮ್ಸನ್ ಬಳಗವು +0.175ರನ್‌ರೇಟ್ ಹೊಂದಿದೆ.
ಪಾಕಿಸ್ತಾನವು ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿದೆ. ಈ ತಂಡದ ಖಾತೆಯಲ್ಲಿ 9 ಪಾಯಿಂಟ್ಸ್ ಇದೆ. ಸರ್ಫರಾಜ್ ಪಡೆ –0.792 ರನ್‌ರೇಟ್ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.